ಬೆಂಗಳೂರು: ಕಳೆದ ವಾರ ದಕ್ಷಿಣ ಭಾರತದಲ್ಲಿ ಫೆಂಗಲ್ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಾಗಿತ್ತು. ಇದರ ಪರಿಣಾಮ ಈ ವಾರ ತಿಳಿಯುತ್ತಿದೆ. ಅಕಾಲಿಕ ಮಳೆ, ಗಾಳಿಯ ಅಬ್ಬರಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಮಾರುಕಟ್ಟೆಗೆ ತರಕಾರಿ ಸರಬರಾಜು ಕಡಿಮೆಯಾಗಿದ್ದು, ಬೆಲೆಗಳು ಏರಿಕೆಯಾಗುತ್ತಿವೆ. ಇನ್ನೊಂದು ತಿಂಗಳು ತರಕಾರಿ ಬೆಲೆ ಕಡಿಮೆ ಆಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳು, ತಮಿಳುನಾಡು ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ತರಕಾರಿ ಸರಬರಾಜು ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿ ಬೆಲೆಗಳು ಏರಿಕೆಯಾಗಿವೆ. ಕಳೆದ ವಾರದಿಂದ ಈರುಳ್ಳಿ, ಬೆಳ್ಳುಳ್ಳಿ ದರ ಹೆಚ್ಚಾಗಿತ್ತು, ಈಗ ಎಲ್ಲಾ ತರಕಾರಿಗಳ ಬೆಲೆಯೂ ಏರಿಕೆಯಾಗಿ ಜೇಬು ಸುಡುತ್ತಿದೆ.
ತರಕಾರಿಗಳ ಬೆಲೆ ಎಷ್ಟು?; ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಹೀಗೆ ದಿನನಿತ್ಯದ ಬಳಕೆಗೆ ಅತ್ಯಗತ್ಯವಾದ ತರಕಾರಿಗಳ ಬೆಲೆಗಳು ಏರಿಕೆಯಾಗಿದೆ. 35-40 ರೂ.ಗಳಿಗೆ ಸಿಗುತ್ತಿರುವ ತರಕಾರಿ ಎಂದರೆ ಆಲೂಗೆಡ್ಡೆ ಮಾತ್ರ. ಉಳಿದ ಎಲ್ಲಾ ತರಕಾರಿಗಳ ಬೆಲೆಗಳು 60ರ ಗಡಿ ದಾಟಿವೆ. ಟೊಮೆಟೋ, ಈರುಳ್ಳಿ ಬೆಲೆ ಕೆಜಿಗೆ 70-80 ರೂ. ನಲ್ಲಿದ್ದು, ಮುಂದಿನ ವಾರ ಶತಕ ಬಾರಿಸುವುದು ಖಚಿತವಾಗಿದೆ.
“ಕಳೆದ ವರ್ಷ ಈ ಸಮಯದಲ್ಲಿ ಟೊಮೆಟೋ ಬೆಲೆ ಮಾತ್ರ ಹೆಚ್ಚಳವಾಗಿತ್ತು. ಆದರೆ ಈ ವರ್ಷ ಈರುಳ್ಳಿ, ಟೊಮೆಟೋ, ಬೆಳ್ಳುಳ್ಳಿ ಸೇರಿ ಎಲ್ಲಾ ತರಕಾರಿಗಳ ಬೆಲೆಗಳು ಏರಿಕೆಯಾಗಿದೆ. ಹೊರ ರಾಜ್ಯದಿಂದ ತರಕಾರಿ ಬರುತ್ತಿಲ್ಲ. ಇನ್ನೊಂದು ತಿಂಗಳು ದರ ಇಳಿಕೆಯಾಗುವುದಿಲ್ಲ” ಎಂದು ನಾಗಸಂದ್ರದ ತರಕಾರಿ ಮಾರುಕಟ್ಟೆಯ ಕೃಷ್ಣಪ್ಪ ಹೇಳಿದ್ದಾರೆ.
ಸದ್ಯ ಟೊಮೆಟೋ 60-70 ರೂ., ಬೆಳ್ಳುಳ್ಳಿ 550-660 ರೂ., ಈರುಳ್ಳಿ 70-80 ರೂ., ನುಗ್ಗೆಕಾಯಿ 500 ರೂ., ಮೆಣಸಿಕಕಾಯಿ 40-50 ರೂ., ಬೀನ್ಸ್ 60 ರೂ., ಕ್ಯಾಪ್ಸಿಕಂ 50-100 ರೂ., ಬಿಟ್ರೋಟ್ 60 ರೂ., ನವಿಲುಕೋಸು 50 ರೂ., ಹೀರೆಕಾಯಿ 70-80 ರೂ., ಶುಂಠಿ 60-80 ರೂ. ದರವಿದೆ. ಅಕಾಲಿಕವಾಗಿ ಸುರಿದ ಮಳೆಗೆ ಬೆಳೆ ನಾಶವಾಗಿದೆ. ಹೊರ ರಾಜ್ಯದಿಂದ ಬರಬೇಕಿದ್ದ ಈರುಳ್ಳಿ, ಬೆಳ್ಳುಳ್ಳಿ ಬರುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಈರುಳ್ಳಿ 100 ಮತ್ತು ಬೆಳ್ಳುಳ್ಳಿ 600 ರೂ. ಗಡಿ ದಾಟಲಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಮಹಾರಾಷ್ಟ್ರದಿಂದ ಜನವರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಸರಬರಾಜು ಆಗಲಿದೆ. ಅಲ್ಲಿಯ ತನಕ ಬೆಲೆ ಇಳಿಕೆಯಾಗುವುದಿಲ್ಲ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ನಾವು ತರಕಾರಿ ತರಲು ಹೋದರೆ ಎಪಿಎಂಸಿಗಳಲ್ಲೇ ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮಳೆಯಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಇಳುವರಿ ಕಡಿಮೆಯಾಗಿದೆ. ಆದ್ದರಿಂದ ಬೆಂಗಳೂರು ನಗರಕ್ಕೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಹ ತರಕಾರಿ ಸರಬರಾಜು ಆಗುತ್ತಿಲ್ಲ. ಆದ್ದರಿಂದ ನಗರದಲ್ಲಿ ಬೆಲೆ ಏರಿಕೆಯಾಗಿದೆ. ಈ ಚಂಡಮಾರುತದ ಸಂಕಷ್ಟದ ನಡುವೆಯೇ ಬಂಗಾಳಕೊಲ್ಲಿಯಲ್ಲಿ ಇನ್ನೂ ಎರಡು ಚಂಡಮಾರುತ ಉಂಟಾಗುವ ನಿರೀಕ್ಷೆ ಇದೆ. ಈ ಚಂಡಮಾರುತ ಪ್ರಬಲವಾದರೆ ಬೆಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಿಸೆಂಬರ್ 20ರ ತನಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಅಕಾಲಿಕವಾಗಿ ಸುರಿದ ಮಳೆ ಭತ್ತದ ಕೊಯ್ಲಿಗೆ ತೊಂದರೆ ಮಾಡಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ
ಸಿಲುಕಿದ್ದಾರೆ. ಈಗ ಮತ್ತೆ ಮಳೆ ಆರಂಭವಾದರೆ ತರಕಾರಿಗಳ ಜೊತೆ ಆಹಾರ ಉತ್ಪನ್ನಗಳ ಬೆಲೆಗಳು ಸಹ ಏರಿಕೆಯಾಗುವುದು ಖಚಿತವಾಗಿದೆ.