ಬೆಂಗಳೂರು: ಮೈಸೂರಿನ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಬೆಂಬಲ ಸೂಚಿಸಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆಗಳು ಕೂಡ ಎಲ್ಲೆಡೆ ನಡೆಯುತ್ತಿವೆ. ಈ ಬಗ್ಗೆ ಪ್ರತಾಪ್ ಸಿಂಹ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮೈಸೂರು ಪಾಲಿಕೆಯು ಕೆಆರ್ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರು ನಾಮಕರಣ ಮಾಡಲು ಮುಂದಾಗಿದ್ದು, ಈ ಬಗ್ಗೆ ಪ್ರತಾಪ್ ಸಿಂಹ ಕೂಡ ಸಹಮತ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರು ಮೈಸೂರಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಅವರ ಹೆಸರು ಇಡುವುದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದರು.
ಮೈಸೂರು ಪಾಲಿಕೆಯು ಕೆಆರ್ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರು ನಾಮಕರಣ ಮಾಡಲು ಮುಂದಾಗಿದ್ದು, ಈ ಬಗ್ಗೆ ಪ್ರತಾಪ್ ಸಿಂಹ ಕೂಡ ಸಹಮತ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರು ಮೈಸೂರಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಅವರ ಹೆಸರು ಇಡುವುದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದರು.
ಕೆಆರ್ಎಸ್ ರಸ್ತೆಗೆ ಪ್ರಿನ್ಸಸ್ ಎಂದು ಮಹರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೆ, ಬದಲಾವಣೆ ಮಾಡುವುದು ಬೇಡ ಎಂದೂ ಪ್ರತಾಪ್ ಸಿಂಹ ಯೂಟರ್ನ್ ಹೊಡೆದಿದ್ದಾರೆ. ಸ್ಥಳೀಯ ಶಾಸಕ ಹರೀಶ್ ಗೌಡ ಅವರಿಗೆ ನಾನೇ ಮನವಿ ಮಾಡುತ್ತೇನೆ. ಆ ರಸ್ತೆಗೆ ಯಾವುದೇ ಹೆಸರಿಲ್ಲ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅವರ ಹೆಸರು ಇಡಲಿ ಎಂದು ಹೇಳಿದ್ದೆ. ಇದಕ್ಕೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂದೆಲ್ಲ ವಂದಂತಿ ಹಬ್ಬಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ನನ್ನ ಮೇಲೆ ಕಳೆದ 3 ತಿಂಗಳಲ್ಲಿ 5 ಎಫ್ಐಆರ್ ಹಾಕಿದೆ. ನನ್ನ ಬದ್ಧತೆ ಪ್ರಶ್ನಿಸುವವರು ನನ್ನ ಟ್ರ್ಯಾಕ್ ರೆಕಾರ್ಡ್ ಒಮ್ಮೆ ನೋಡಿ ಎಂದು ವದಂತಿ ಹಬ್ಬಿಸಿದವರಿಗೆ ಟಾಂಗ್ ನೀಡಿದ್ದಾರೆ. ರಸ್ತೆಗೆ ಹೆಸರಿಡುವ ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡ. ಇದನ್ನು ವಿವಾದ ಮಾಡುವುದು ಬೇಡ. ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದೂ ಪ್ರತಾಪ್ ಸಿಂಹ ಯೂಟರ್ನ್ ಹೊಡೆದಿದ್ದಾರೆ.
ಮೈಸೂರಿಗೆ ಮಹಾರಾಜರ ಕೊಡುಗೆಯೂ ಸಾಕಷ್ಟಿದೆ. ಜನಪ್ರತಿನಿಧಿಗಳ ಕೊಡುಗೆಯೂ ಇದೆ. ಆದರೆ ಈಗಾಗಲೇ ಇಟ್ಟಿರುವ ಹೆಸರನ್ನು ಬದಲಾಯಿಸುವುದು ಬೇಡ. ಇದಕ್ಕೆ ಬದಲಾಗಿ ಯಾವುದಾದರೂ ಹೊಸ ಬಡಾವಣೆ ನಿರ್ಮಿಸಿ ಅದಕ್ಕೆ ಸಿದ್ದರಾಮಯ್ಯ ಅವರ ಹೆಸರು ಇಡಲಿ. ಯಾವುದಾದರೂ ರಸ್ತೆಗೆ ಸಿಎಂ ಹೆಸರಿಡಲಿ ಎಂದಿದ್ದಾರೆ. ಮುಡಾದಿಂದಲೇ ಈ ಕೆಲಸ ನಡೆದರೆ ಇದು ಇನ್ನೂ ಅರ್ಥಪೂರ್ಣವಾದದ್ದು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರನ್ನು ನಾನು ಸೈದ್ಧಾಂತಿಕವಾಗಿ ಈಗಲೂ ಮತ್ತು ಮುಂದೆಯೂ ವಿರೋಧಿಸುತ್ತೇನೆ. ಆದರೆ ರಸ್ತೆಗೆ ಅವರ ಹೆಸರು ಇಡುವ ವಿಚಾರದಲ್ಲಿ ಸಣ್ಣತನ ಬೇಡ ಎಂದಿದ್ದರು. ಮಹಾರಾಜರ ನಂತರವೂ ಅನೇಕ ಸಾಧಕರು ಮೈಸೂರಿನಲ್ಲಿ ಬಂದಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದರು. ಇದೀಗ ಅವರು ಯೂಟರ್ನ್ ಹೊಡೆದಿದ್ದಾರೆ.