ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ನಮ್ಮ ಮೆಟ್ರೋ, ಇದೀಗ ಟಿಕೆಟ್ ದರ ಏರಿಸಿ, ಜನರ ಶಾಪಕ್ಕೆ ಗುರಿಯಾಗಿದೆ. ಟಿಕೆಟ್ ದರ ದುಪ್ಪಟ್ಟು ಏರಿಸಿದ ಕಾರಣ ಜನರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ದರ ತುಸು ಕಡಿಮೆ ಮಾಡಿರುವುದಾಗಿ ಬಿಎಂಆರ್ಸಿಎಲ್ ತಿಳಿಸಿದೆ. ಆದರೆ, ಇದಕ್ಕೆ ಪ್ರಯಾಣಿಕರ ಸಮ್ಮತಿ ಇಲ್ಲ. ಹೀಗಾಗಿ ಮೆಟ್ರೋ ಪ್ರಮಾಣಿಕರ ಸಂಖ್ಯೆ ಕೂಡ ಗಣನೀಯವಾಗಿ ಕುಸಿದಿದೆ. ಆದರೆ, ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯವೂ ಮೆಟ್ರೋದಲ್ಲೇ ಸಂಚರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ಭಾರಿ ಬಿಸಿ ತಟ್ಟಿದೆ.
ಸದ್ಯ ನಮ್ಮ ಮೆಟ್ರೊ ದರ ಏರಿಕೆಯಿಂದ ತೀವ್ರ ತೊಂದರೆಗೀಡಾಗಿರುವ ವಿದ್ಯಾರ್ಥಿಗಳು ಕೈಗೆಟುಕುವ ದರದಲ್ಲಿ ಮಾಸಿಕ ಪಾಸ್ ವ್ಯವಸ್ಥೆಯನ್ನು ಪರಿಚಯಿಸಬೇಕು ಎಂದು ಬಿಎಂಆರ್ಸಿಎಲ್ಗೆ ಒತ್ತಾಯಿಸುತ್ತಿದ್ದಾರೆ. ಕಳೆದ ವಾರದ ದರ ಏರಿಕೆಯ ನಂತರ ಮೆಟ್ರೋ ಪ್ರಯಾಣದ ದರ ಗಗನಕ್ಕೇರಿದೆ. ಈಗ 15 ಕಿ.ಮೀ ಮೀರಿ ಪ್ರಯಾಣಿಸುವ ವಿದ್ಯಾರ್ಥಿಗಳು ಪ್ರಯಾಣಿಸುವ ದೂರವನ್ನು ಅವಲಂಬಿಸಿ, ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರುವವರು ಪೀಕ್ ಅವರ್ನಲ್ಲಿ ಶೇ 5ರಷ್ಟು ಹಾಗು ಸಾಮಾನ್ಯ ಅವಧಿಯಲ್ಲಿ ಶೇ 10ರಷ್ಟು ರಿಯಾಯಿತಿ ಪಡೆಯುತ್ತಾರೆ.
ಬೆಂಗಳೂರಿನೆಲ್ಲೆಡೆ ಮೆಟ್ರೋ ಜಾಲ ಹಬ್ಬಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯವೂ ಶಾಲಾ-ಕಾಲೇಜುಗಳಿಗೆ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದಾರೆ. ಬಿಎಂಟಿಸಿ ಬಸ್ಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ವ್ಯವಸ್ಥೆ ಇದೆ. ಇಲ್ಲಿ ಹುಡುಗರಿಗೆ ರಿಯಾಯಿತಿ ಪಾಸ್ ನೀಡಿದರೆ, ಹುಡುಗಿಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವ್ಯವಸ್ಥೆ ಇದೆ. ಆದರೆ, ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ರಿಯಾಯಿತಿ ಇಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ದೇಶದ ಬೇರೆ ನಗರಗಳಲ್ಲಿರುವ ಮೆಟ್ರೋ ಜಾಲಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರ ನಿಗದಿ ಮಾಡಿರುವ ಮಾಹಿತಿ ಇದೆ. ಕೇರಳದ ಕೊಚ್ಚಿಯಲ್ಲಿರು ಮೆಟ್ರೋದಲ್ಲಿ 45 ದಿನಗಳ ವಿದ್ಯಾರ್ಥಿ ಪಾಸ್ ಇದ್ದು, ಇದರ ಬೆಲೆ 600 ರೂಪಾಯಿ ಎನ್ನಲಾಗಿದೆ. ಈ ಪಾಸ್ ಮೂಲಕ ಒಟ್ಟು 56 ಟ್ರಿಪ್ಗಳಷ್ಟು ವಿದ್ಯಾರ್ಥಿಗಳು ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು ಎನ್ನಲಾಗಿದೆ.
ದರ ಏರಿಕೆಯಿಂದ ಪ್ರತಿನಿತ್ಯ ಮೆಟ್ರೋದಲ್ಲೇ ಸಂಚರಿಸುವ ವಿದ್ಯಾರ್ಥಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಈ ಪರಿಷ್ಕೃತ ದರವು ಪೋಷಕರಿಗೂ ಬಹಳ ಹೊರೆಯಾಗಿದೆ. ಈಗ ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ನಿಜಕ್ಕೂ ಹೊರೆಯಾಗಲಿದೆ. ಹೀಗಾಗಿ ದಯವಿಟ್ಟು ವಿದ್ಯಾರ್ಥಿಗಳ ಅನುಕೂಲಕ್ಕೆ ರಿಯಾಯಿತಿ ದರದಲ್ಲಿ ಮಾಸಿಕ ಪಾಸ್ ಕೊಡಿ ಎಂದು ಬೇಡಿಕೊಂಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪಾಸ್ಗಳನ್ನು ನೀಡುತ್ತಿವೆ. ಆದರೆ ನಮ್ಮ ಮೆಟ್ರೋ ಪ್ರಾರಂಭದಿಂದಲೂ ವಿದ್ಯಾರ್ಥಿ ಪಾಸ್ ನೀಡುವುದಿಲ್ಲ. ಪೀಕ್ ಸಮಯದಲ್ಲಿ ಶೇ 5ರಷ್ಟು ಹಾಗೂ ಪೀಕ್ ಅಲ್ಲದ ಅವಧಿಯಲ್ಲಿ ಶೇ 10ರಷ್ಟು ರಿಯಾಯಿತಿಯೊಂದಿಗೆ ಸ್ಮಾರ್ಟ್ ಕಾರ್ಡ್ಗಳನ್ನು ಮಾತ್ರವೇ ನೀಡುತ್ತಿದ್ದೇವೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಬಿಎಂಆರ್ಸಿಎಲ್ ಬೆನ್ನುತಟ್ಟಿಕೊಂಡಿದೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಮೆಟ್ರೋ ಈಡೇರಿಸುತ್ತಾ ಅನ್ನೋದು ಕಾದುನೋಡಬೇಕಿದೆ.