ಬೆಂಗಳೂರು: ಮೈಕೊರೆವ ಚಳಿಯು ಬೆಂಗಳೂರಿನಾದ್ಯಂತ ಆವರಿಸಿದೆ. ಕಳೆದೊಂದು ವಾರದಿಂದಲೇ ಬೆಂಗಳೂರಿನಲ್ಲಿ ಅತ್ಯಧಿಕ ಕನಿಷ್ಠ ತಾಪಮಾನ ದಾಖಲಾಗಿದೆ. ಮೊನ್ನೆಯಷ್ಟೇ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ತಾಪಮಾನ ನಗರದಲ್ಲಿ ಇಂದು ಸೋಮವಾರ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 48 ಗಂಟೆಗಳ ಕಾಲ ಇದೇ ರೀತಿಯ ಚಳಿ, ಮಂಜಿನ ವಾತಾವರಣ ಮುಂದುವರಿಯಲಿದೆ. ಮಹಿಳೆ, ಮಕ್ಕಳು, ಅನಾರೋಗ್ಯಪೀಡಿತರು ಆರೋಗ್ಯ ಕಾಳಜಿ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಬದಲಾಗುತ್ತಿರುವ ಹವಾಮಾನ ವೈಪರಿತ್ಯಗಳ ಪ್ರಭಾವವು ಕರ್ನಾಟಕದ ಮೇಲೆ ಬಿದ್ದಿದೆ. ಹೀಗಾಗಿ ನಾಡಿನಾದ್ಯಂತ ಚಳಿ ಆವರಿಸಿದ್ದು, ಉದ್ಯಾನ ನಗರಿ ಬೆಂಗಳೂರಿನಲ್ಲೂ ಭಾರೀ ಚಳಿಯ ಅನುಭವ ಆಗುತ್ತಿದೆ. ಸಂಜೆ ಆದರೆ ಸಾಕು, ಮನೆಯಿಂದ ಹೊರಬರದಂತಹ ಅನುಭವವಾಗುತ್ತಿದೆ.
ಸೋಮವಾರ ಬೆಳಗ್ಗೆ 09 ಗಂಟೆ ಚಳಿ ವಿವರ ಇಂದು ಬೆಳಗ್ಗೆ 09 ಗಂಟೆ ಹೊತ್ತಿಗೆ ಬೆಂಗಳೂರು ನಗರದಲ್ಲಿ ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ (ಕೆಐಎಎಲ್) 15.5 ಹಾಗೂ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಸದ್ಯ 14.4.ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಮೂರು ಸ್ಥಳದಲ್ಲಿ ಗರಿಷ್ಠ ತಾಪಮಾನ 27 ರಿಂದ 29.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಸೋಮವಾರದ ಬೆಳಗಿನ ವರದಿಯಲ್ಲಿ ತಿಳಿಸಿದೆ. ನಗರದಲ್ಲಿ ಚಳಿ ಇಳಿಕೆ ಯಾವಾಗ? ನಗರದಲ್ಲಿ ಬೆಳ್ಳಂಬೆಳಗ್ಗೆ ಮಂಜು, ಅತೀವ ಚಳಿ ದಾಖಲಾಗುತ್ತಿದೆ. ಈ ವಾತಾವರಣ ಜನವರಿ 8ರವರೆಗೂ ಮುಂದುವರಿಯಲಿದೆ. ಈ ವೇಳೆ ಕನಿಷ್ಠ ತಾಪಮಾನ 15-13 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು. ನಂತರ ಜನವರಿ 11ರವರೆಗೆ ತಾಪಮಾನವು ಸಹಜ ಸ್ಥಿತಿಗೆ ಮರಳಲಿದ್ದು, ಚಳಿ ಕಡಿಮೆ ಆಗುವ ನಿರೀಕ್ಷೆಗಳು ಇವೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜನವರಿ 09ರಿಂದ ಜನವರಿ 11ರವರೆಗೆ ನಗರದಲ್ಲಿ ಉತ್ತಮ ಬಿಸಿಲಿನ ಅನುಭವವಾಗಲಿದ್ದು, ಚಳಿಯ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ. ಆಗ ನಗರದಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ವರದಿ ತಿಳಿಸಿದೆ.
ಇನ್ನೂ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ 14 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ತಾಪಮಾನ ದಾಖಲಾಗುವ ಮೂಲಕ ಅತೀವ ಚಳಿ ಸೃಷ್ಟಿಯಾಗಿದೆ. ಸಂಜೆ ಆಗುತ್ತಿದ್ದಂತೆ ಬೆಚ್ಚಗಿನ ಧರಿಸು ಧರಿಸುವ ಜನರು, ಬೆಳಗ್ಗೆ 8 ಗಂಟೆ ಆದರೂ ಮನೆಯಿಂದ ಹೊರ ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಚಳಿ ಆವರಿಸಿದೆ. ಈ ಸಂಕ್ರಾಂತಿವರೆಗೂ ಚಳಿ ಆವರಿಸಿದೆ. ದೆಹಲಿ, ಉತ್ತರ ಭಾರತ ಸೇರಿದಂತೆ ಉತ್ತರ ಭಾಗದ ರಾಜ್ಯಗಳಲ್ಲಿ ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ಸೋಮವಾರದ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.