ಬೆಂಗಳೂರು : ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಯಶವಂತಪುರ ರೈಲ್ವೇ ನಿಲ್ದಾಣದ ಸಮೀಪ ನಡೆದಿದೆ. ನಿಲ್ದಾಣದ ಪ್ಲಾಟ್ಫಾರ್ಮ್ 1ರ ಬಳಿಯ ಕಾಂಪೌಂಡ್ ಪಕ್ಕದಲ್ಲಿ ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದೆ.

ಮಹಿಳೆಯ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿ ಹತ್ಯೆಗೈದು, ಬಳಿಕ ಬೆಂಕಿ ಇಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬೆಳಗ್ಗೆ ಮೃತದೇಹವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ಮಾಹಿತಿ ಬಂದಿದ್ದು, 1ನೇ ಪ್ಲಾಟ್ಫಾರ್ಮ್ನ ಕೊನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬೇರೆಡೆಯಿಂದ ಮೃತದೇಹ ತಂದಿರುವ ಕುರುಹುಗಳಿಲ್ಲ. ಸ್ಥಳದಲ್ಲಿಯೇ ಹತ್ಯೆಗೈದು, ಮೃತದೇಹಕ್ಕೆ ಬೆಂಕಿಯಿಟ್ಟಿರುವ ಶಂಕೆಯಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ರಾಜ್ಯ ರೈಲ್ವೇ ಎಸ್ಪಿ ಡಾ. ಸೌಮ್ಯಲತಾ ಎಸ್.ಕೆ. ಮಾಹಿತಿ ನೀಡಿದ್ದಾರೆ.