ಬೀದರ್: ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ತಂದೆಯೇ ದೊಣ್ಣೆಯಿಂದ ಹೊಡೆದು ಮಗಳನ್ನೇ ಬರ್ಬರ ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ನಡೆದಿದೆ.
ಮೋನಿಕಾ ಮೋತಿರಾಮ ಜಾಧವ್ (18) ಕೊಲೆಯಾದ ದುರ್ದೈವಿ. ಮಗಳನ್ನು ಕೊಲೆ ಮಾಡಿ ತಂದೆ ಮೋತಿರಾಮ ಪರಾರಿಯಾಗಿದ್ದಾನೆ. ಪ್ರೀತಿ-ಪ್ರೇಮದಿಂದ ದೂರವಿರುವಂತೆ ಮಗಳಿಗೆ ತಂದೆ ತಿಳುವಳಿಕೆ ಹೇಳಿದ್ದಾನೆ. ಅಲ್ಲದೇ ನಿನಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಮಾಡುತ್ತೇನೆ ಎಂದಿದ್ದಾನೆ. ಈ ವೇಳೆ ತಂದೆಯ ಎದುರು ಮಗಳು ಪ್ರೀತಿ ವಿಷಯ ಪ್ರಸ್ತಾಪಿಸಿದ್ದಲ್ಲದೇ ಅವನನ್ನೇ ಮದುವೆ ಆಗುತ್ತೇನೆ ಎಂದು ಗಲಾಟೆ ಮಾಡಿದ್ದಾಳೆ. ಬುದ್ಧಿಮಾತು ಹೇಳಿದ್ರೂ ಕೇಳದ ಹಿನ್ನೆಲೆ ಕೋಪಗೊಂಡು ತಂದೆ ಮಗಳನ್ನು ಕೊಲೆ ಮಾಡಿದ್ದಾನೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೊನಿಕಾ ಮೃತಪಟ್ಟಿದ್ದಾರೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಬಲೆ ಬಿಸಿದ್ದಾರೆ.