ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರ ಹೊರವಲಯ ಚದುಲಪುರ ಗೇಟ್ ಬಳಿ ಮಂಗಳವಾರ ಬೆಳ್ಳಂಬೆಳಿಗ್ಗೆ ೭.೩೦ರ ವೇಳೆಯಲ್ಲಿ ಉಂಟಾದ ಭೀಕರ ಅಪಘಾತದಲ್ಲಿ ಒಬ್ಬ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಬೆದಿರಿದ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕುಪ್ಪಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬ ವ್ಯಕ್ತಿಯೇ ಮೃತ ವ್ಯಕ್ತಿಯಾಗಿದ್ದು ಇವರ ವಯಸ್ಸು ೫೦ ರಿಂದ ೬೦ ವರ್ಷ ಎಂದು ಗುರ್ತಿಸಲಾಗಿದೆ.ದ್ವಿಚಕ್ರವಾಹನ ಸವಾರ ಊರಿನ ಕಡೆ ಹೋಗುತ್ತಿದ್ದಾಗ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕೆ ದ್ವಿಚಕ್ರ ವಾಹನ ಸವಾರ ಟಿಪ್ಪರ್ ಅಡಿಗೆ ಸಿಕ್ಕಿದ್ದು ಈತನ ಮೇಲೇಯೇ ಟಿಪ್ಪರ್ ಹರಿದಿದ್ದರಿಂದ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮೃತನ ಸಂಬಂಧಿಕರ ರೋಧನ ಮುಗಿಲುಮುಟ್ಟಿತ್ತು.
ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಟಿಪ್ಪರ್ಗಳ ಹಾವಳಿಯಿಂದ ನಿತ್ಯವೂ ಸಾರ್ವಜನಿಕರು ಜೀವಭಯದಿಂದ ನಡೆಯುವಂತಾಗಿದೆ.ವಾರದಲ್ಲಿ ಒಂದಲ್ಲಾ ಒಂದು ಘಟನೆಯಲ್ಲಿ ಅಮಾಯಲರು ಜೀವಚೆಲ್ಲುವಂತಾಗಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಏನೂ ಕ್ರಮವಹಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಸಂಬಂಧ ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರೊಂದಿಗೆ ಭೇಟಿ ನೀಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಐ.ಆರ್,ಖಾಸಿಂ, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು.
ಪ್ರತಿಭಟನೆಯಿಂದಾಗಿ ಒಂದು ಗಂಟೆಗೂ ಹೆಚ್ಚುಕಾಲ ರಾಷ್ಟ್ರೀಯ ಹೆದ್ದಾರಿ ೪೪ ರಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.ಆಕ್ರೋಶ ತಣ್ಣಗಾದ ನಂತರ ಜನರ ಮನವೊಲಿಸಿದ ಪೊಲೀಸರು ಕ್ರಮ ಜರುಗಿಸುವುದಾಗಿ ತಿಳಿಸಿ ಪ್ರತಿಭಟನೆ ವಾಪಸ್ಸು ಮಾಡುವಲ್ಲಿ ಯಶಸ್ವಿಯಾದರು.ಈ ಸಂಬಂಧ ನಂದಿಗಿರಿಧಾಮ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟಿಪ್ಪರ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.