ಬಿಜೆಪಿಯವರಿಗೆ ನನ್ನ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ: ಸಿಎಂ ಸಿದ್ದರಾಮಯ್ಯ

ಮುಡಾ ಸೈಟ್ ಕೇಸಿಗೂ ಮನಿ ಲಾಂಡ್ರಿಂಗ್ ಗೂ ಏನು ಸಂಬಂಧ, ನನ್ನ ಪಾತ್ರವೇನಿದೆ? : ಸಿಎಂ ಸಿದ್ದರಾಮಯ್ಯ

ಮೈಸೂರು: ಆಪರೇಷನ್ ಕಮಲದ ಮೂಲಕ ಬಿಜೆಪಿಯವರು ನಮ್ಮ ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಆಪರೇಷನ್ ಕಮಲದ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದರು. ಅದು ಈಡೇರಲಿಲ್ಲ. ಈಗ ನನ್ನ ರಾಜೀನಾಮೆ ಕೇಳುವ ಮೂಲಕ ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ರಾಜೀನಾಮೆ ಕೇಳಲು ಅವರಿಗೆ ಯಾವ ನೈತಿಕ ಹಕ್ಕೂ ಇಲ್ಲ ಎಂದರು.

ಈ ವಿಚಾರದಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ. ಬೇಲ್ ಮೇಲಿರುವ ಹೆಚ್.ಡಿ.ಕುಮಾರಸ್ವಾಮಿ ಈಗ ಕೇಂದ್ರ ಮಂತ್ರಿಗಳಾಗಿದ್ದಾರೆ. ಅವರ ರಾಜೀನಾಮೆ ಏಕೆ ಕೇಳುವುದಿಲ್ಲ? ರಾಜ್ಯ ಬಿಜೆಪಿಯಲ್ಲಿ ಅನೇಕ ಭ್ರಷ್ಟರಿದ್ದಾರೆ. ಅವರಿಗೆ ಇಂದಿಗೂ ರಾಜ್ಯದ ಜನ ಬಹುಮತ ನೀಡಿಲ್ಲ. ನಮಗೆ ಜನ ಬಹುಮತ ನೀಡಿ ಆಶೀರ್ವಾದ ಮಾಡಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು.

ರಾಷ್ಟ್ರಪತಿಗಳಾಗಲಿ, ರಾಜ್ಯಪಾಲರಾಗಲಿ ಸಂವಿಧಾನಾತ್ಮಕವಾಗಿ ಕೆಲಸ ಮಾಡಬೇಕು. ಅವರು ಭಾರತೀಯ ಸಂವಿಧಾನದ ಮುಖ್ಯಸ್ಥರು. ಅದರಂತೆ ಯಾವ ರಾಜ್ಯಪಾಲರಾದರೂ ಆಡಳಿತ ವಿಚಾರದಲ್ಲಿ ತಲೆಹಾಕಬಾರದು. ರಾಜ್ಯಪಾಲರ ಈ ಧೋರಣೆ ಇಡೀ ದೇಶದಲ್ಲಿ ಚರ್ಚೆಯಾಗಬೇಕು. ನಮಗೆ ಜನ ಸ್ಪಷ್ಟ ಬಹುಮತ ನೀಡಿದ್ದಾರೆ. ಅದರ ಪ್ರಕಾರ ಆಡಳಿತ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರವೂ ದೇಶದಲ್ಲಿ ಅವರ ವಿರೋಧಿ ಸರ್ಕಾರಗಳ ಮೇಲೆ ಸಿಬಿಐ, ಇಡಿ ಹಾಗೂ ರಾಜ್ಯಪಾಲರ ಕಚೇರಿಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ರಾಜ್ಯಪಾಲರ ನಡೆ ವಿರುದ್ಧವೂ ಮುಖ್ಯಮಂತ್ರಿ ಕಿಡಿಕಾರಿದರು.

Leave a Reply

Your email address will not be published. Required fields are marked *