ಮರಿಯಮ್ಮನಹಳ್ಳಿ: ಸಮೀಪದ 114-ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆ.ಬಿಎಂಎಂ ಇಸ್ಪಾತ್ ಲಿಮಿಟೆಡ್ ಕಂಪನಿ ಎರಡು ವರ್ಷದ ತೆರಿಗೆ ಮೊತ್ತ ₹16 ಕೋಟಿ ಪಾವತಿಸದೆ ಬಾಕಿ ಉಳಿಸಿಕೊಂಡಿದೆ.
2023-24ನೇ ಸಾಲಿನ ತೆರಿಗೆ ₹8,34,14,123, 2024-25ನೇ ಸಾಲಿನ ₹8,34,14,123 ಸೇರಿದಂತೆ ಎರಡು ವರ್ಷದ ಒಟ್ಟು ತೆರಿಗೆ ₹16,68,28,246 ಪಂಚಾಯಿತಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳಿಂದ ಗೊತ್ತಾಗಿದೆ.
2022-23ನೇ ಸಾಲಿನವರೆಗೆ ತೆರಿಗೆ ಮೊತ್ತ ₹22,60,749 ಇತ್ತು. 2023-24ನೇ ಸಾಲಿನಿಂದ ತೆರಿಗೆ ಪರಿಷ್ಕರಣೆ ಮಾಡಲು ಪಂಚಾಯಿತಿಯವರು ಕಂಪನಿಯವರಿಗೆ ಪತ್ರ ಬರೆದು ತಿಳಿಸಿದ್ದರು. ಕಂಪನಿಗೆ ಸಂಬಂಧಿಸಿದ ಭೂಮಿಯ ವಿವರ, ನಿರ್ಮಾಣಗೊಂಡ ಪ್ರದೇಶ, ಖಾಲಿ ಪ್ರದೇಶಗಳ ದಾಖಲೆಗಳನ್ನು ಸಲ್ಲಿಸುವಂತೆ ಕೋರಿದ್ದರು.
ಕಾರ್ಖಾನೆಯವರು 2024ರ ಮಾರ್ಚ್ 3ರಂದು ಪಂಚಾಯ್ತಿಗೆ ಬರೆದ ಪತ್ರದಲ್ಲಿ ಕಟ್ಟಡ, ಪ್ರೊಸಸಿಂಗ್ ಯೂನಿಟ್, ಹಸಿರೀಕರಣ, ರಸ್ತೆ, ಖಾಲಿ ನಿವೇಶನ ಸೇರಿದಂತೆ ಒಟ್ಟು ಐದು ಅಂಶಗಳನ್ನೊಳಗೊಂಡ ಒಟ್ಟು 61,35,172 ಚದರ ಮೀಟರ್ ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಪಂಚಾಯಿತಿಯವರು ತೆರಿಗೆ ಪರಿಷ್ಕರಣೆ ಮಾಡಿ, ₹8,34,14,123 ತೆರಿಗೆ ನಿಗದಿಮಾಡಿತ್ತು. ಎರಡು ವರ್ಷದ ತೆರಿಗೆ ಪಾವತಿಸುವಂತೆ ಏ.20ರಂದು ಡಿಮ್ಯಾಂಡ್ ನೋಟಿಸ್ (ಬೇಡಿಕೆಯ ಬಿಲ್ಲು) ನೀಡಿದ್ದಲ್ಲದೆ 3 ನೋಟಿಸ್ಗಳನ್ನು ನೀಡಿದ್ದರೂ ಕಂಪನಿ ತೆರಿಗೆ ಪಾವತಿಗೆ ಮುಂದಾಗಿಲ್ಲ.
ಒಪ್ಪದ ಕಂಪನಿ: ವರ್ಷಕ್ಕೆ ₹8 ಕೋಟಿ ತೆರಿಗೆ ಭಾರ ಹೊತ್ತುಕೊಳ್ಳಲು ಒಪ್ಪದ ಬಿಎಂಎಂ ಕಂಪನಿ, 3 ನೋಟಿಸ್ಗಳಿಗೆ ಸೆ.21ರಂದು ಉತ್ತರ ನೀಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ನಿಯಮ 202(1) ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳುವ ಕುರಿತು ಪ್ರಸ್ತಾಪ ಮುಂದಿಟ್ಟಿತು.
ತೆರಿಗೆ ಪಾವತಿ: ಕಂಪನಿಯು 2022-23ನೇ ಸಾಲಿನಲ್ಲಿ ₹22,60,749 ತೆರಿಗೆ ಪಾವತಿಸಿದ್ದು, 2023-24ನೇ ಸಾಲಿಗೆ ಆ ತೆರಿಗೆ ಪಾವತಿಸಿದ ಒಟ್ಟು ಮೊತ್ತದ ನಾಲ್ಕು ಪಟ್ಟು ಅಂದರೆ, ₹90,42,996 ಪಾವತಿಸಿ, 2024-25ರಿಂದ ಮುಂಬರುವ ವರ್ಷಗಳಿಗೆ ತೆರಿಗೆ ಮೊತ್ತವನ್ನು ಪ್ರತಿ ಮೂರು ವರ್ಷಕ್ಕೆ ಶೇ 5ರಷ್ಟು ಹೆಚ್ಚಿಸುವುದಾಗಿ ಪ್ರಸ್ತಾಪ ಮುಂದಿಟ್ಟಿದೆ. ಗ್ರಾಮಸಭೆಯಲ್ಲಿ ಅನುಮೋದಿಸಿ ಪಂಚಾಯಿತಿ ಜೊತೆ ಒಪ್ಪಂದ ಮಾಡಿಕೊಳ್ಳಬೇಕು ಎಂಬುದು ಕಂಪನಿಯ ಇಂಗಿತ.
ಆದರೆ ಇದಕ್ಕೊಪ್ಪದ ಪಂಚಾಯಿತಿ, ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು ತೀರ್ಮಾಣ ಕೈಗೊಳ್ಳಲು ಮುಂದಾಗಿದೆ. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಸದಸ್ಯರು ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದ್ದು, ಒಟ್ಟಾರೆ ತೆರಿಗೆ ಬಾಕಿ ಜಟಾಪಟಿ ಮುಂದುವರಿದಿದೆ.
ಕಾರ್ಖಾನೆಯ ಭೂಮಿ ಡಣಾಪುರ ಪಂಚಾಯಿತಿಯ ಜತೆಗೆ ಇನ್ನೂ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಡಣಾಯಕನಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ 730 ಎಕರೆ ಪ್ರದೇಶ ಹಾಗೂ ಜಿ.ನಾಗಲಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ 300 ಎಕರೆ ಪ್ರದೇಶದಲ್ಲಿ ವಸತಿ ಗೃಹಗಳು ಸೇರಿದಂತೆ ಖಾಲಿ ನಿವೇಶನ ಹೊಂದಿದ್ದು, ಅಲ್ಲಿಯೂ ಪ್ರಸಕ್ತ ಸಾಲಿನ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಡಣಾಯಕನಕೆರೆ ಪಂಚಾಯಿತಿಯ ಪ್ರಸಕ್ತ ಸಾಲಿನ ತೆರಿಗೆ ₹8.76 ಲಕ್ಷ ಹಾಗೂ ಜಿ.ನಾಗಲಾಪುರ ಪಂಚಾಯಿತಿಯ ಪ್ರಸಕ್ತ ಸಾಲಿನ ತೆರಿಗೆ ಒಟ್ಟು ₹57.50 ಲಕ್ಷ ಬಾಕಿ ಇದೆ ಎಂದು ಎರಡು ಪಂಚಾಯಿತಿಯ ಪಿಡಿಒ ಜಿಲಾನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಎನ್.ಮಂಜುನಾಥ್ ಪಿಡಿಒ 114-ಡಣಾಪುರ ಗ್ರಾಮ ಪಂಚಾಯಿತಿಬಿಎಂಎಂ ಕಂಪನಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಪತ್ರ ಬರೆದಿದ್ದು ಅದನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸಭೆ ತೀರ್ಮಾನ ಕೈಗೊಂಡಂತೆ ಮುಂದುವರಿಯಲಾಗುವುದುರಾಜ್ಯ ಸರ್ಕಾರವು ಸಂಯೋಜತ ಸ್ಟೀಲ್ ಘಟಕವನ್ನು ಹೋಬಳಿ ವ್ಯಾಪ್ತಿಯ 114-ಡಣಾಪುರ ಜಿ.ನಾಗಲಾಪುರ ಡಣಾಯಕನಕೆರೆ ಬ್ಯಾಲಕುಂದಿ ಗರಗ ಗ್ರಾಮಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಅನುಮತಿ ನೀಡಿದ್ದು ಅದಕ್ಕಾಗಿ ಕೆಐಎಡಿಬಿಯು ಸುಮಾರು 3500 ಎಕರೆ ಭೂಪ್ರದೇಶವನ್ನು ಭೂಸ್ವಾದೀನಪಡಿಸಿಕೊಂಡು ಕಂಪನಿಗೆ ನೀಡಿದೆ. ಇಲ್ಲಿ 5000ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗಾವಕಾಶ ಕಲ್ಪಿಸಿದೆ. ಅಲ್ಲದೆ ಸಿಎಸ್ಆರ್ ಚಟುವಟಿಕೆಯಲ್ಲಿ ಮತ್ತು ಅನುದಾನ ರೂಪವಾಗಿ ಈ ಭಾಗದಲ್ಲಿ ಹಲವಾರು ಜನಹಿತ ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗಿದೆ ಎಂಬುದು ಕಂಪನಿಯ ವಾದ.ಕಂಪನಿಯ ವಾದವೇನು?