Book My Show ಗೋಲ್ಮಾಲ್: ಹಣ ಕೊಟ್ಟರೆ ಎಲ್ಲವೂ ಸಿಗುತ್ತೆ.

Book My Show ಗೋಲ್ಮಾಲ್: ಹಣ ಕೊಟ್ಟರೆ ಎಲ್ಲವೂ ಸಿಗುತ್ತೆ.

ಸಿನಿಮಾ ನೋಡಲು ಹೋಗುವವರು ಆನ್ಲೈನ್ನಲ್ಲಿ ಅದರ ರೇಟಿಂಗ್, ರಿವ್ಯೂ, ಸಿನಿಮಾ ನೋಡಿರುವವರ ಕಮೆಂಟ್ಗಳನ್ನು ನೋಡಿಕೊಂಡು ಸಿನಿಮಾ ನೋಡಲು ಹೋಗುವವರ ಸಂಖ್ಯೆ ಈಗ ಹೆಚ್ಚಿದೆ. ಅದರಲ್ಲೂ ಬುಕ್ ಮೈ ಶೋ ರೇಟಿಂಗ್ಸ್ ಅನ್ನು ಫಾಲೋ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಅದರ ಹಿಂದಿನ ಸತ್ಯಾಂಶವನ್ನು ನಿರ್ಮಾಪಕರೊಬ್ಬರು ಹೇಳಿದ್ದಾರೆ.

ಈಗ ಸಿನಿಮಾ ವೀಕ್ಷಣೆಯ ರೀತಿಯೇ ಬದಲಾಗಿದೆ. ಮೊದಲೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು, ಚಿತ್ರತಂಡ ನೀಡುವ ಜಾಹೀರಾತನ್ನು ನೋಡಿ ಜನ, ಯಾವ ಸಿನಿಮಾ ನೋಡಬೇಕು ಎಂದು ನಿರ್ಧರಿಸುತ್ತಿದ್ದರು. ಈ ಆನ್ಲೈನ್ ಜಮಾನಾನಲ್ಲಿ ರೇಟಿಂಗ್, ಇಂಟ್ರೆಸ್ಟ್, ರಿವ್ಯೂಗಳನ್ನು ನಂಬಿ ಜನ ಸಿನಿಮಾ ವೀಕ್ಷಣೆಗೆ ಮುಂದಾಗುತ್ತಿದ್ದಾರೆ. ಆದರೆ ತೆರೆ ಮರೆಯಲ್ಲಿ ರೇಟಿಂಗ್, ಇಂಟ್ರೆಸ್ಟ್ಗಳನ್ನು ಹಣ ಕೊಟ್ಟು ಖರೀದಿಸಲಾಗುತ್ತಿದೆ.

ಸಿನಿಮಾ ನೋಡುವ ಮುಂಚೆ ಬುಕ್ ಮೈ ಶೋನಲ್ಲಿ ಅದಕ್ಕೆ ಎಷ್ಟು ರೇಟಿಂಗ್ ಸಿಕ್ಕಿದೆ, ಎಷ್ಟು ಜನ ಇಂಟ್ರೆಸ್ಟ್ ಎಂದು ಮಾರ್ಕ್ ಮಾಡಿದ್ದಾರೆ. ಎಷ್ಟು ಲೈಕ್ಸ್ ಸಿಕ್ಕಿದೆ, ಎಷ್ಟು ಕಮೆಂಟ್ಸ್ ಬಂದಿವೆ, ಯಾವ ರೀತಿಯ ಕಮೆಂಟ್ಸ್ ಬಂದಿವೆ ಎಂಬುದನ್ನು ನೋಡಿ ಸಿನಿಮಾ ನೋಡಲು ಹೋಗುವವರ ಸಂಖ್ಯೆ ಈಗ ಹೆಚ್ಚಿದೆ. ಆದರೆ ಸಿನಿಮಾ ನಿರ್ಮಾಪಕರುಗಳು ಹಣ ಕೊಟ್ಟು ತಮ್ಮ ಸಿನಿಮಾಗಳಿಗೆ ಲೈಕ್ಸ್, ಇಂಟ್ರೆಸ್ಟ್, ಕಮೆಂಟ್ಸ್ಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ನಿರ್ಮಾಪಕರೊಬ್ಬರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ತೆಲುಗು ಚಿತ್ರರಂಗದ ಜನಪ್ರಿಯ ನಿರ್ಮಾಪಕ ನಾಗವಂಶಿ. ಒಳ್ಳೆಯ ನಿರ್ಮಾಪಕ ಆಗಿರುವ ಜೊತೆಗೆ ಫಿಲ್ಟರ್ ಇಲ್ಲದೆ ಇದ್ದಿದ್ದನ್ನು ಇದ್ದಂತೆ ನೇರವಾಗಿ ಹೇಳುವ ವ್ಯಕ್ತಿತ್ವ ನಾಗವಂಶಿಯದ್ದು. ಸಹ ನಿರ್ಮಾಪಕರಾಗಿ, ಕಾರ್ಯಕಾರಿ ನಿರ್ಮಾಪಕರಾಗಿ, ನಿರ್ಮಾಪಕರಾಗಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಾಗವಂಶಿ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಿರ್ಮಾಪಕರುಗಳು ಹಣ ಕೊಟ್ಟು ಬುಕ್ ಮೈ ಶೋನಲ್ಲಿ ಲೈಕ್ಸ್ ಖರೀದಿ ಮಾಡುವುದನ್ನು ಹೇಳಿಕೊಂಡಿದ್ದಾರೆ.

‘ನಾವೇ ನಮ್ಮ ಸಿನಿಮಾಕ್ಕೆ ಹಣ ಕೊಟ್ಟು ಬುಕ್ ಮೈ ಶೋನಲ್ಲಿ ಲೈಕ್ಸ್, ಇಂಟ್ರೆಸ್ಟ್ ಜಾಸ್ತಿ ಮಾಡಿಸಿಕೊಂಡಿದ್ದೇವೆ. ಒಂದೇ ದಿನ ಎರಡು ಸಿನಿಮಾ ಬಿಡುಗಡೆ ಆಗುತ್ತಿರುವಾಗ ಪಿಆರ್ಗಳು ಬಂದು, ನಮ್ಮ ಸಿನಿಮಾಕ್ಕೆ ಲೈಕ್ಸ್ ಕಡಿಮೆ ಇದೆ, ಅದನ್ನು ಜಾಸ್ತಿ ಮಾಡಬೇಕು ಎಂದಾಗ ಹಣ ಕೊಟ್ಟು ನಾವೇ ಲೈಕ್ಸ್, ಇಂಟ್ರೆಸ್ಟ್, ಕಮೆಂಟ್ಸ್ಗಳನ್ನು ಜಾಸ್ತಿ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ ನಾಗವಂಶಿ. ಮಾತು ಮುಂದುವರೆಸಿ, ‘ಅದಕ್ಕೆ ನಾನು ಹೇಳುತ್ತೇನೆ, ಆನ್ಲೈನ್ ರೇಟಿಂಗ್, ಲೈಕ್ಸ್ಗಳನ್ನು ನಂಬಿ ಸಿನಿಮಾಕ್ಕೆ ಹೋಗಬೇಡಿ’ ಎಂದು ನೇರವಾಗಿಯೇ ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿಯೂ ಈ ಕೆಟ್ಟ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಬಗ್ಗೆ ಹಿಂದೆ ಕೆಲ ಪ್ರೇಕ್ಷಕರೇ ಆರೋಪ ಮಾಡಿದ್ದಿದೆ. ಚಿತ್ರಮಂದಿರಗಳಲ್ಲಿ ಸೀಟುಗಳು ಖಾಲಿ ಇರುತ್ತವೆ, ಆದರೆ ಬುಕ್ ಮೈ ಶೋನಲ್ಲಿ ಟಿಕೆಟ್ ಖರೀದಿಗೆ ಮುಂದಾದಾಗ ಫಿಲ್ಲಿಂಗ್ ಫಾಸ್ಟ್ ಎಂದು ತೋರಿಸುತ್ತಿರುತ್ತದೆ ಅಥವಾ ಸೀಟುಗಳು ಬುಕ್ ಆಗಿರುವಂತೆ ತೋರಿಸುತ್ತದೆ. ಆ ಮೂಲಕ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡುತ್ತಿದ್ದಾರೆ ಎಂಬ ಭ್ರಮೆ ಮೂಡುವಂತೆ ಮಾಡಲಾಗುತ್ತಿದೆ’ ಎಂದು ಆರೋಪಿಸಲಾಗಿತ್ತು.

Leave a Reply

Your email address will not be published. Required fields are marked *