ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿ, ಅಂದಿನ ವಿರೋಧ ಪಕ್ಷಕ್ಕೆ ಪ್ರಮುಖ ಅಸ್ತ್ರವಾಗಿದ್ದ ಗುತ್ತಿಗೆ ಹಾಗೂ ಬಿಲ್ ಪಾವತಿಗೆ ‘ಕಮಿಷನ್’ ಆರೋಪ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮತ್ತೆ ಪ್ರತಿಧ್ವನಿಸಿದೆ.

ಸಿಎಂ ಸಿದ್ದರಾಮಯ್ಯನವರಿಗೆ ಏಪ್ರಿಲ್ 3 ರಂದು ಪತ್ರ ಬರೆದ ಸಂಘ ಲೋಕೋಪಯೋಗಿ ಇಲಾಖೆ, ನಾಲ್ಕು ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಣದ ಕೈಗಳ ಬಗ್ಗೆ ಚರ್ಚೆ ಮಾಡಿ ಸಣ್ಣ ಗುತ್ತಿಗೆದಾರರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದಿದೆ.
ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಈಗ ಸಿಡಿದೆದ್ದಿದ್ದು ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಆರೋಪಿಸಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಧ್ಯವರ್ತಿಗಳ ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೇ ಸ್ಪೆಷಲ್ ಎಲ್ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಸತೀಶ್ ಜಾರಕಿಹೊಳಿ ಕುಟುಂಬಸ್ಥರು, ನೀರಾವರಿ ಇಲಾಖೆಯಲ್ಲಿ ಬೋಸರಾಜ್ ಮಗ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರವನ್ನು ಶೇ 40ರ ಕಮಿಷನ್ ಸರ್ಕಾರ’ ಎಂದು ಜರೆದಿದ್ದ ಕಾಂಗ್ರೆಸ್ ನಾಯಕರು, ರಾಜ್ಯದಾದ್ಯಂತ ಆಂದೋಲನವನ್ನೇ ನಡೆಸಿದ್ದರು. ಇದು, ಆ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ವರವಾಗಿ ಪರಿಣಮಿಸಿತ್ತು. ಈಗ ಗುತ್ತಿಗೆದಾರರ ಸಂಘ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಹಲವು ಆರೋಪಗಳನ್ನು ಮಾಡಿದೆ.