ಬ್ರಹ್ಮಾವರ: ಇಲ್ಲಿನ ಪಾಸ್ಪೋರ್ಟ್ ಕಚೇರಿಯ ಸಮಸ್ಯೆ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಪಾಸ್ಪೋರ್ಟ್ ಕಚೇರಿ ಮತ್ತು ಪ್ರಧಾನ ಅಂಚೆ ಕಚೇರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.
ಕಚೇರಿ ಸಿಬ್ಬಂದಿಯೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿ, ಅರ್ಜಿದಾರರಿಗೆ ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಾಸ್ಪೋರ್ಟ್ ಕಚೇರಿಯಲ್ಲಿ ಅರ್ಜಿ ಪರಿಶೀಲನಾ ಅಧಿಕಾರಿ ಹುದ್ದೆ ಖಾಲಿ ಇದ್ದು, ಅರ್ಜಿದಾರರಿಗೆ ಸಮಸ್ಯೆ ಉಂಟಾಗಿದೆ. ಅರ್ಜಿ ಪರಿಶೀಲನೆಗೆ ಬೆಂಗಳೂರಿಗೆ ಕಳುಹಿಸಿ ಅಲ್ಲಿಂದ ಪರಿಶೀಲನೆಯಾಗಿ ಪಾಸ್ಪೋರ್ಟ್ ಬರುವಾಗ ವಿಳಂಬವಾಗುತ್ತಿದೆ. ಆದಷ್ಟು ಬೇಗ ಪಾಸ್ಪೋರ್ಟ್ ಕಚೇರಿಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಗ್ರಾಮೀಣ ಭಾಗದವರಿಗೆ ಬ್ರಹ್ಮಾವರದಲ್ಲೇ ಅಲ್ಪಸ್ವಲ್ಪ ಕೊರತೆ ಸರಿಪಡಿಸಿ ಪೂರ್ಣ ಪ್ರಮಾಣದ ಸುಸಜ್ಜಿತ ಪಾಸ್ಪೋರ್ಟ್ ಕಚೇರಿ ಆರಂಭಿಸುವ ಆಶಯ ಇದೆ ಎಂದು ತಿಳಿಸಿದರು.
ಅಂಚೆ ಕಚೇರಿಯಲ್ಲಿ ಸಿಗುವ ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಪಾಲನೆ, ರಕ್ಷಣೆಗೆ ಇರುವ ಯೋಜನೆ. ಜಿಲ್ಲೆಯಲ್ಲಿ 70 ಸಾವಿರ ಜನ ಸುಕನ್ಯಾ ಸಮೃದ್ಧಿ ಖಾತೆದಾರರಾಗಿದ್ದಾರೆ. ಅಪಘಾತ ವಿಮೆಯಲ್ಲಿ ವರ್ಷಕ್ಕೆ ₹750 ಪಾವತಿಸಿದರೆ ₹10 ಲಕ್ಷ ಪರಿಹಾರ ಸಿಗುತ್ತದೆ. ಜನರು ಅಂಚೆ ಕಚೇರಿಯಲ್ಲಿ ಸಿಗುವ ಇಂತಹ ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದರು.
ಈಗ ಅಂಚೆ ಕಚೇರಿಯಲ್ಲಿ ಆಧಾರ್ಕಾರ್ಡ್ ತಿದ್ದುಪಡಿ ಸೇವೆ ಲಭ್ಯವಿದೆ. ಅಲ್ಲದೇ ಗ್ರಾಮಾಂತರ ಪ್ರದೇಶದಲ್ಲಿ ಅಲ್ಲಿಯೇ ಹೋಗಿ ತಿದ್ದುಪಡಿ ಮಾಡುವ ಸೇವೆ ನೀಡುತ್ತಿದ್ದು, ಗ್ರಾಮೀಣ ಜನರಿಗೆ ಉಪಯೋಗವಾಗಿದೆ ಎಂದು ತಿಳಿಸಿದರು.
ಪಾಸ್ಪೋರ್ಟ್ ಕಚೇರಿಯ ಪೂರ್ಣಿಮಾ, ಅಂಚೆಕಚೇರಿ ಅಧೀಕ್ಷಕ ರಮೇಶ ಪ್ರಭು, ಪೋಸ್ಟ್ಮಾಸ್ಟರ್ ಬಿ. ಗಾಯತ್ರಿ, ಸಹಾಯಕ ಅಂಚೆ ಅಧಿಕಾರಿ ವಸಂತ, ಅಂಚೆ ನಿರೀಕ್ಷಕ ಶಂಕರ ಲಮಾಣಿ ಇದ್ದರು.