ಶರಾವತಿ ಹಿನ್ನೀರಿಗೆ ಸೇತುವೆ: ದ್ವೀಪವಾಸಿಗಳ ಬದುಕಿನೊಂದಿಗೆ ಬೆಸೆದ ಲಾಂಚ್ ಮುಂದುವರೆಸಲು ಮನವಿ

ಶರಾವತಿ ಹಿನ್ನೀರಿಗೆ ಸೇತುವೆ: ದ್ವೀಪವಾಸಿಗಳ ಬದುಕಿನೊಂದಿಗೆ ಬೆಸೆದ ಲಾಂಚ್ ಮುಂದುವರೆಸಲು ಮನವಿ

ಶಿವಮೊಗ್ಗ: ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಿಸಿದಾಗ ಶರಾವತಿ ಹಿನ್ನೀರಿನಲ್ಲಿ ಉಂಟಾದ ದ್ವೀಪಕ್ಕೆ ಆಸರೆ ಆಗಿದ್ದೇ ಲಾಂಚ್ ಸೇವೆ. ಕಳೆದ 15-20 ವರ್ಷಗಳಿಂದ ಲಾಂಚ್ ಸೇವೆ ನಡೆದುಕೊಂಡು ಬಂದಿದೆ. ಹಾಗಾಗಿ, ದ್ವೀಪ ಜನಜೀವನದ ಒಂದು ಭಾಗವೇ ಆಗಿಬಿಟ್ಟಿದೆ. ಹಿನ್ನೀರಿನ ಪ್ರದೇಶಗಳಾದ ಸಿಗಂದೂರು, ತುಮರಿ, ಬ್ಯಾಕೋಡು, ಬ್ರಾಹ್ಮಣಕೊಪ್ಪಿಗೆ ಸೇರಿದಂತೆ ಹಲವು ಗ್ರಾಮಗಳ ಜನರ ಜೀವನದ ಜೊತೆಗೆ ಲಾಂಚ್ ಬೆಸೆದು‌ಕೊಂಡಿದೆ.

ಲಾಂಚ್​ನಿಂದ ದ್ವೀಪಕ್ಕೆ ಹತ್ತಿರವಾದ ಸಾಗರ: ಲಾಂಚ್​ ಸೇವೆಯನ್ನು ಒಳನಾಡು ಸಾರಿಗೆ ವಿಭಾಗ ನಿರ್ವಹಿಸುತ್ತಿದೆ. ಸಿಗಂದೂರಿನಿಂದ ಸಾಗರ ಪೇಟೆಗೆ 30 ಕಿ.ಮೀ ದೂರವಿದೆ. ಲಾಂಚ್​ ಸೇವೆ ಬಳಸಿಕೊಂಡು ಬಂದರೆ 30 ಕಿ.ಮೀ. ದೂರ. ಆದರೆ ಲಾಂಚ್ ಇಲ್ಲದಿದ್ದರೆ ಸಾಗರ ಪೇಟೆ 60 ಕಿ.ಮೀ ದೂರವಾಗುತ್ತದೆ. ಇದರ ಜೊತೆಗೆ, ಈ ಭಾಗದ ಜನರು ಭಟ್ಕಳ ರಸ್ತೆಯ ಮೂಲಕ ತಾಳಗುಪ್ಪಕ್ಕೆ ಬಂದು ಸಾಗರ ತಲುಪಬೇಕು. ಲಾಂಚ್ ಸೇವೆ ಪ್ರತಿದಿನ ಕತ್ತಲಾಗುತ್ತಿದ್ದಂತೆ ನಿಲ್ಲುತ್ತದೆ. ಇದರೊಂದಿಗೆ ಜನರ ಸಂಪರ್ಕ ಬಂದ್. ಮತ್ತೆ ಲಾಂಚ್ ಸೇವೆ ಬೆಳಗ್ಗೆಯೇ ಪ್ರಾರಂಭ. ಲಾಂಚ್ ಮೂಲಕವೇ ದ್ವೀಪದ‌ ಜನರಿಗೆ ಹಾಲು, ಪೇಪರ್, ದಿನಸಿ ಮುತಾದವು ಲಭ್ಯ. ಇದೇ ಲಾಂಚ್‌ನಲ್ಲಿ ಬಸ್, ಕಾರು ಸೇರಿದಂತೆ ಸ್ಥಳೀಯರ ಸಣ್ಣ ಲಾರಿಗಳನ್ನೂ ಸಾಗಿಸಲಾಗುತ್ತಿದೆ.

ಲಾಂಚ್​ನಿಂದಾಗಿ ದ್ವೀಪಕ್ಕೆ ಪ್ರವಾಸಿಗರ ಆಗಮನ: ಶರಾವತಿ ಹಿನ್ನೀರಿನ ಸಂಪರ್ಕಕ್ಕೆ ಲಾಂಚ್ ಸಂಪರ್ಕ ಕೊಂಡಿಯಾಗಿದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಸಾಗರದಿಂದ ಹಿನ್ನಿರಿನ ಮೂಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಬಹುದು.

ಹಿನ್ನೀರಿಗೆ ಸೇತುವೆ ನಿರ್ಮಾಣ: 2019ರಿಂದ ಶರಾವತಿ ಹಿನ್ನೀರಿಗೆ ಸೇತುವೆ ಕಾಮಗಾರಿ ಪ್ರಾರಂಭವಾಗಿದೆ. 423.15 ಕೋಟಿ ರೂ. ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ. 2.14 ಕಿ.ಮೀ ಉದ್ದ, 16 ಮೀಟರ್​ ಅಗಲದ ದ್ವಿಪಥ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದು ಆಧುನಿಕತೆಯ ವಿನ್ಯಾಸ ಹೊಂದಿದೆ. ಸ್ಪ್ಯಾನ್​ ಲೆನ್ಥ್​​ 177 ಮೀಟರ್​ ಇದೆ. ಕೇಬಲ್ ಆಧರಿತ ಭಾರತದ 8ನೇ ಸೇತುವೆಯಾಗಿದೆ. 16 ಮೀಟರ್​ ಅಗಲದ ಸೇತುವೆಯಲ್ಲಿ 1.5 ಮೀಟರ್ ಅಗಲದ ಎರಡು ಕಡೆ ಫುಟ್‌ಪಾತ್ ಇರಲಿದೆ. ನಾಲ್ಕು ಸ್ಪ್ಯಾನ್​ ಕೇಬಲ್ ಇರುತ್ತದೆ. ನೀರಿನ ಆಳ 50-60 ಮೀಟರ್ ಇದ್ದ ಕಾರಣ ಇದನ್ನು ಕೇಬಲ್ ಸೇತುವೆಯನ್ನಾಗಿ ನಿರ್ಮಿಸಲಾಗುತ್ತಿದೆ. 740 ಮೀಟರ್ ಕೇಬಲ್ ಆಧರಿತ ಸೇತುವೆ ನಿರ್ಮಾಣವಾಗಲಿದೆ. ಉಳಿದವು ಬ್ಯಾಲೆನ್ಸ್ ಆಧರಿತ ಸೇತುವೆಯಾಗುತ್ತದೆ.

ಶರಾವತಿ ಸಂತ್ರಸ್ತರಿಗೆ ಸಾಗರ, ಶಿವಮೊಗ್ಗಕ್ಕೆ ಸಂಪರ್ಕ‌ ಕಲ್ಪಿಸುವ ದೃಷ್ಟಿಯಿಂದ ಲಾಂಚ್ ಸೇವೆ ಬಂದಿದೆ. ನಂತರ ಲಾಂಚ್​ ಪ್ರವಾಸೋದ್ಯಮದ ಭಾಗವಾಯಿತು.‌ ಸಿಗಂದೂರು ಚೌಡೇಶ್ವರಿಯ ದರ್ಶನಕ್ಕೆ ಹಾಗೂ ಶರಾವತಿ ಹಿನ್ನೀರಿನ ಸೊಬಗು ಸವಿಸಲು ಬರುವವರ ಸಂಖ್ಯೆ ಏರಿಕೆಯಾದ ಕಾರಣಕ್ಕೆ ಲಾಂಚ್‌ಗಳ ಸಂಖ್ಯೆಯೂ ಹೆಚ್ಚಿತು. ರಾತ್ರಿ ವೇಳೆ ಏನಾದರೂ ತುರ್ತು, ಅಪಘಡ ನಡೆದಾಗ ಲಾಂಚ್ ಸಿಬ್ಬಂದಿ ತುರ್ತು ಸೇವೆ ನೀಡಿದ್ದಾರೆ” ಎಂದು ತುಮರಿಯ ಜಿ.ಟಿ.ಸತ್ಯನಾರಾಯಣ ತಿಳಿಸಿದರು.

Leave a Reply

Your email address will not be published. Required fields are marked *