ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಜಿಲ್ಲೆಯ ಬಾಗೇಪಲ್ಲಿ(ಭಾಗ್ಯನಗರ) ತಾಲೂಕಿನ ದೇವಿರೆಡ್ಡಿಪಲ್ಲಿಯಲ್ಲಿ ಒಂದೇ ಕುಟುಂಬದ 8 ಜನ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೆಂದು ಕೇಳಿಬಂದಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂಬಾರಿಗೆ ವಿಷ ಬೆರೆಸಿದ್ದ ಪಾಪಿ
ದೇವಿರೆಡ್ಡಿಪಲ್ಲಿಯ ಮದ್ದರೆಡ್ಡಿ ಮತ್ತು ಪಾಪಿರೆಡ್ಡಿ ಎಂಬುವವರು ಅಕ್ಕಪಕ್ಕದ ಮನೆಯವರಾಗಿದ್ದು, ಎರಡು ವರ್ಷಗಳ ಹಿಂದೆ ಇಬ್ಬರ ಮನೆಗಳ ನಡುವಿನ ಮೂರಡಿ ಖಾಲಿ ಜಾಗದ ಸಲುವಾಗಿ ಜಗಳವಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಚೌಡರೆಡ್ಡಿ ಎಂಬಾತನಿಗೆ ಸುಪಾರಿ ಕೊಟ್ಟ ಪಾಪಿರೆಡ್ಡಿ ಕುಟುಂಬದವರ ಆಹಾರದಲ್ಲಿ ವಿಷ ಬೆರೆಸುವಂತೆ ಹೇಳಿದ್ದ. ಅಂತೆಯೇ ಮದ್ದರೆಡ್ಡಿಯ ಅಡುಗೆ ಮನೆಗೆ ನೀರು ಕುಡಿಯುವ ನೆಪದಲ್ಲಿ ತೆರಳಿದ್ದ ಚೌಡರೆಡ್ಡಿ, ಸಾಂಬಾರಿಗೆ ವಿಷದ ಪೌಡರ್ ಬರೆಸಿದ್ದ.
ವಿಷ ಸೇವಿಸಿದ ಮೂವರ ಸ್ಥಿತಿ ಚಿಂತಾಜನಕ
ಇದನ್ನರಿಯದ ಕುಟುಂಬಸ್ಥರು ಎಂದಿನಂತೆ ಊಟ ಮಾಡಿದ್ದು, ಮನೆ ಯಜಮಾನಿ ಮದ್ದಕ್ಕ ಹಾಗೂ ಇವರ ಇಬ್ಬರು ಮಕ್ಕಳಾದ ಮದ್ದರೆಡ್ಡಿ ಹಾಗೂ ಮಂಜುನಾಥ್ ಸೇರಿದಂತೆ ಮದ್ದರೆಡ್ಡಿ ಪತ್ನಿ ಭಾಗ್ಯಮ್ಮ, ಮಗಳು ಮಣಿ, ಮಂಜುನಾಥ್ ಪತ್ನಿ ಈಶ್ವರಮ್ಮ, ಮಂಜುನಾಥ್ ನ ಮಗ ಸುಬ್ರಮಣಿ, ಹಾಗೂ ಸಂಬಂಧಿ ಬಾಲಕಿ ಭಾನುಶ್ರೀ ಈ ಎಂಟೂ ಜನ ಅಸ್ವಸ್ಥರಾಗಿದ್ದಾರೆ.
ಈ 8 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಮಂಜುನಾಥ್ ಹಾಗೂ ಮದ್ದರೆಡ್ಡಿ ಸೇರಿದಂತೆ ಸುಬ್ರಮಣಿ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿರಿಸಲಾಗಿದೆ. ಉಳಿದ 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರೂ ದೇಹದೊಳಗೆ ವಿಷ ಸೇರಿರುವುದರಿಂದ ಯಾವಾಗ ಏನಾಗುತ್ತದೆಂದು ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಹಿನ್ನೆಲೆ ಎಸ್ಪಿ ಕುಶಲ್ ಚೌಕ್ಸೆ ಸೇರಿದಂತೆ ಬಾಗೇಪಲ್ಲಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ಪಾಪಿರೆಡ್ಡಿ ಹಾಗೂ ಚೌಡರೆಡ್ಡಿಯನ್ನು ಬಂಧಿಸಲಾಗಿದೆ.
For More Updates Join our WhatsApp Group :
