ಬೆಂಗಳೂರು : ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಆಸ್ತಿ ದರಗಳು ಕೂಡ ಏರುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಹೊರವಲಯಗಳು ಕೂಡ ಭಾರಿ ಬೆಳವಣಿಗೆ ಕಾಣುತ್ತಿವೆ. ಈ ಹಿನ್ನೆಲೆ ಆ ಭಾಗದಲ್ಲೂ ಭೂಮಿ ಖರೀದಿ ದುಬಾರಿಯಾಗಿದೆ. ಇದೀಗ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಆಸ್ತಿ ಮಾಲೀಕರಿಗೆ ಸಹಿಸುದ್ದಿ ನೀಡಿದ್ದಾರೆ. ಈ ಭಾಗದಲ್ಲಿ ಭೂಮಿ ಇದ್ದವರಿಗೆ ಹೆಚ್ಚಿನ ದರ ನೀಡುವುದಾಗಿ ಅವರು ಭರವಸೆಯೂ ನೀಡಿದ್ದಾರೆ.

ಬೆಂಗಳೂರಿಗೆ ಪರ್ಯಾಯವಾಗಿ ಬಿಡದಿ ಬಳಿ ನಿರ್ಮಿಸುತ್ತಿರುವ ಟೌನ್ಶಿಪ್ ಯೋಜನೆಗೆ ಕಳೆದ 18 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಬಿಡದಿ ಟೌನ್ಶಿಪ್ ನಿರ್ಮಾಣವಾಗಲಿದೆ. ಇದಕ್ಕಾಗಿ ಈ ಮಹತ್ವಾಕಾಂಕ್ಷೆಯ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಕೂಡ ಹೊರಡಿಸಲಾಗಿದೆ. ಈ ಭೂಸ್ವಾಧೀನಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆ ವಿರೋಧಿಸಿ ರೈತರು ಹೋರಾಟಕ್ಕೂ ಮುಂದಾಗಿದ್ದಾರೆ.
ಈ ಸಂಬಂಧ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅವರ ಭೂಮಿಗೆ ದರ ಕೊಡುತ್ತೇವೆ. ಈಗಾಗಲೇ ರೈತರೊಂದಿಗೆ ಮಾತನಾಡಿದ್ದೇವೆ. ಬೆಂಗಳೂರು ನಗರಕ್ಕಿಂತಲೂ ಹೆಚ್ಚಿನ ಹಣ ಸಿಗುವಂತೆ ಮಾಡುತ್ತೇವೆ. ಈ ಬಗ್ಗೆ ಯಾರಿಗೂ ಆತಂಕ, ಅನುಮಾನ ಬೇಡ ಎಂದು ಭರವಸೆ ನೀಡಿದ್ದಾರೆ.
ಬಿಡದಿ ಟೌನ್ಶಿಪ್ ನಿರ್ಮಾಣಕ್ಕೆ ರೈತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಅವರ ಭೂಮಿಗಳಿಗೆ ನ್ಯಾಯಯುತ ಹಾಗೂ ಹೆಚ್ಚಿನ ದರ ನೀಡುವುದಾಗಿ ಡಿಸಿಎಂ ಹೇಳಿದ್ದಾರೆ. ಕರ್ನಾಟಕ ಸರ್ಕಾರವು ಬೆಂಗಳೂರು ನಗರದ ಜನ ದಟ್ಟಣೆ ಕಡಿಮೆ ಮಾಡಲು “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ’ ಯೋಜನೆಯನ್ನು ರೂಪಿಸಿದ್ದು, ಇದರ ಅನ್ವಯ ಬಿಡದಿ ಟೌನ್ಶಿಪ್ ನಿರ್ಮಾಣವಾಗಲಿದೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಿರ್ಮಾಣವಾಗುವ ಮೊದಲ ಟೌನ್ಶಿಪ್ ಕುರಿತು ವರದಿ ಕೂಡ ಸಿದ್ಧವಾಗಿದೆ.
ಈ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯನ್ನು ಮತ್ತೆ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ 9,200 ಹೆಕ್ಟೇರ್ ಭೂ ಪ್ರದೇಶವನ್ನು ಒಳಗೊಂಡ 22 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ತರಲಾಗುತ್ತಿದೆ. ಒಟ್ಟಾರೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಸ್ತೀರ್ಣ 23,361 ಹೆಕ್ಟೇರ್ಗೆ ವಿಸ್ತರಣೆಯಾಗಿದ್ದು, ಬಿಡದಿ ಪಟ್ಟಣವೂ ಸೇರಿದಂತೆ ಒಟ್ಟು 92 ಸಾವಿರ ಜನಸಂಖ್ಯೆ ಹೊಂದಿರುವ 59 ಗ್ರಾಮಗಳು ಕೂಡ ಸೇರಿವೆ.
ಭೂಸ್ವಾಧೀನ ಎಲ್ಲೆಲ್ಲಿ?: ಈ ವ್ಯಾಪ್ತಿಯಲ್ಲಿ ಒಟ್ಟು 8,943 ಎಕರೆ ಭೂ ಸ್ವಾಧೀನಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ಸರಕಾರಿ ಭೂಮಿ ಹೊರತುಪಡಿಸಿ 7,300 ಖಾಸಗಿ ಜಮೀನು ಭೂಸ್ವಾಧೀನಕ್ಕೆ ಒಳಪಡಲಿದೆ. ರಾಮನಗರ ತಾಲೂಕು, ಬಿಡದಿ, ಮಂಡಲಹಳ್ಳಿ ಗ್ರಾಮದ 52 ಮಂದಿಯ 71 ಎಕರೆ ಪ್ರದೇಶ, ಹೊಸೂರು ಗ್ರಾಮದ 2,452 ಎಕರೆ ಪ್ರದೇಶ, ಬೈರಮಂಗಲ ಗ್ರಾಮದ 1,131 ಎಕರೆ ಜಾಗ, ಬನ್ನಿಗಿರಿ ಗ್ರಾಮದಲ್ಲಿ 714 ಎಕರೆ, ಕೆಂಪಯ್ಯನ ಪಾಳ್ಯ ಗ್ರಾಮದಲ್ಲಿ 330 ಎಕರೆ, ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮದ 63 ಎಕರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇದೀಗ ರೈತರ ಭೂಮಿಗೆ ಹೆಚ್ಚಿನ ಹಣ ದೊರಕಿಸಿಕೊಡುವ ಭರವಸೆ ನೀಡಲಾಗಿದೆ.