ಗದಗ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪುತ್ರ ಬಿ ವೈ ವಿಜಯೇಂದ್ರ ವಿರುದ್ಧ ಕೆಎಸ್ ಈಶ್ವರಪ್ಪ ವಾಗ್ದಾಳಿ ಮುಂದುವರೆಸಿದ್ದು, ಬಿವೈ ವಿಜಯೇಂದ್ರ, ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು 10 ಸಾವಿರ ಮತಗಳಿಂದ ಗೆದ್ದಿದ್ದಾನೆ ಎಂದು ಗಂಭೀರವಾದ ಆರೋಪ ಮಾಡಿದರು.
ಗದಗನಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿಂದುತ್ವದ ತತ್ವ ಸಿದ್ದಾಂತಗಳು ಈಗ ಇಲ್ಲ. ಈವಾಗ ಹಿಂದುತ್ವ ಬಿಟ್ಟ ಬಿಜೆಪಿಯಲ್ಲಿ ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದಕ್ಕೆ ಸರಿಯಾಗಿ ಬ್ರೇಕ್ ಹಾಕಬೇಕು, ಹಿಂದುತ್ವಕ್ಕೆ ಸರಿಯಾದ ಬೆಲೆ ಸಿಗಬೇಕು. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು ಎಂದು ಅವರು ತಿಳಿಸಿದರು.
ಬಿವೈ ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ಶಾಸಕರಾಗಿದ್ದಿರಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಅದಕ್ಕೆ ಈವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಉತ್ತರ ನೀಡಿಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು 10 ಸಾವಿರ ವೋಟ್ನಿಂದ ಗೆದ್ದರು. ಏನು ಹೊಂದಾಣಿಕೆಯಾಗಿತ್ತು ಎನ್ನುವುದನ್ನು ಡಿಕೆ ಶಿವಕುಮಾರ್ ಬಹಿರಂಗ ಮಾಡಲಿ. ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬರ್ತಾಯಿದ್ದಾರೆ. ಈ ಹೊಂದಾಣಿಕೆ ರಾಜಕಾರಣ ಮುಕ್ತಾಯವಾಗಬೇಕು ಎಂದು ಅವರು ತಿಳಿಸಿದರು.