ಬೆಂಗಳೂರಿನ: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದಿದ್ದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳ ಜನರ ಜೀವನ ಸ್ಥಿತಿ ಸಹಜ ಸ್ಥಿತಿಯತ್ತ ಬಂದ ಬೆನ್ನಲ್ಲೆ ಮತ್ತೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದ್ದು, ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಜೋರು ಮಳೆ, ಕೆಲವೆಡೆ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತಾಪಮಾನ ಕೊಂಚ ಇಳಿಕೆ ಆಗಿದೆ. ಮಾರ್ಚ್ 21ರಂದು ನಗರಾದ್ಯಂತ ಭಾರಿ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳು ಕೆರೆಗಳಂತಾಗಿದ್ದವು. ಕೆಲವೇ ನಿಮಿಷಗಳ ಕಾಲ ಸುರಿದ ಮಳೆಗೆ ಸಂಚಾರ ಅಡಚಣೆ ಉಂಟಾಗಿತ್ತು. ಇಂತದ್ದ ಮಳೆ ಮುಂದಿನ ಮೂರು ದಿನ ಬರುವ ನಿರೀಕ್ಷೆ ಇದೆ. ಸಮುದ್ರ ಮೇಲ್ಮೈನಲ್ಲಿ ಉಂಟಾದ ವೈಪರಿತ್ಯಗಳ ಕಾರಣದಿಂದ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ತಾಪಾಮನದಲ್ಲಿ ಇಳಿಕೆ, ತಂಪು ವಾತಾವರಣ ರಾಜಧಾನಿಯಲ್ಲಿ ಗರಿಷ್ಠ ತಾಪಮಾನದಲ್ಲಿ ಬದಲಾವಣೆ ಆಗಿದೆ. 34 ರಷ್ಟಿದ್ದ ತಾಪಮಾನ ಇದೀಗ 32ಕ್ಕೆ ಇಳಿಕೆ ಆಗಿದೆ. ಕನಿಷ್ಠ ತಾಪಮಾನ 22 ರಿಂದ 21ಕ್ಕೆ ಇಳಿಕೆ ಆಗಿದೆ. ಮಳೆ ಅಬ್ಬರದ ವೇಳೆ ತಂಪು ಗಾಳಿ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ನಗರಾದ್ಯಂತ ಸೋಮವಾರ ಬೆಳಗ್ಗೆ ಬಿಸಿಲಿನ ವಾತಾವರಣ ಕಂಡು ಬಂದರೂ ಸಂಜೆಯಾಗುತ್ತಿದ್ದಂತೆ ವಾತಾವರಣದಲ್ಲಿ ಬದಲಾವಣೆ ಆಗಿದೆ. ತಂಪು ಗಾಳಿ ಬೀಸುತ್ತಿದೆ. ತಡರಾತ್ರಿ ಮಳೆಯಾಗುವ ಲಕ್ಷಣಗಳು ಇವೆ ಎಂದು ಮುನ್ಸೂಚನೆ ಇದೆ.
ರಾಜ್ಯದ ತುಮಕೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್ 24ರಂದು ಬೆಳಗ್ಗೆ ಕೊನೆಗೊಂಡದಂತೆ ಅದರ ಹಿಂದಿನ ಒಂದು ದಿನದಲ್ಲಿ ತುಮಕೂರು ವ್ಯಾಪ್ತಿಯಲ್ಲಿ 92.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಕುಣಿಗಲ್ ಯಾದವಾನಿ ಪ್ರದೇಶದಲ್ಲಿ ಗಂಟೆಗಳ ಕಾಲ ಮಳೆ ಸುರಿದಿದೆ.
ಮೊನ್ನೆಯಷ್ಟೇ ಮಧ್ಯ ಕರ್ನಾಟಕದ ಹಾವೇರಿಯಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹಿಂಗಾರು ಫಲಸು ಹೊಲದಲ್ಲಿಯೇ ಬಿಟ್ಟ ರೈತರಲ್ಲಿ ಆತಂಕ ಕಂಡು ಬಂತು.
5 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಇಂದಿನಿಂದ (ಸೋಮವಾರ) ಮುಂದಿನ 24 ಗಂಟೆಗಳ ಕಾಲ ಕಲಬುರಗಿ ಜಿಲ್ಲೆ, ವಿಜಯಪುರ, ಬಾಗಲಕೋಟೆ, ಮಂಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಬರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಈ ಭಾಗದಲ್ಲಿ ಇಂದು ಸಂಜೆಯಿಂದ ಮಳೆ ಅಬ್ಬರಿಸಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾದ ಭೂಮಿಯು ವರುಣಾರ್ಭಟದಿಂದ ತಂಪಾಗಲಿದೆ. ಬಿಸಿಲ ಧಗೆ ತಾತ್ಕಾಲಿಕವಾಗಿ ಅಂತ್ಯ ಕಾಣಲಿದೆ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.