ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲಾ ಪಕ್ಷಗಳು ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದು, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ, ಕೂಡಲೇ ಕೇಂದ್ರ ಚುನಾವಣಾ ಆಯೋಗ ಈ ಮೂರು ಕ್ಷೇತ್ರಗಳ ಉಪಚುನಾವಣೆ ರದ್ದು ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಆಗ್ರಹಿಸಿದ್ದಾರೆ.
ನಗರದ ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರು ಮುಖ್ಯಮಂತ್ರಿಗಳು ತಮ್ಮ ಮಕ್ಕಳನ್ನು ರಾಜಕೀಯವಾಗಿ ಬೆಳೆಸಲು ಉಪಚುನಾವಣೆ ನಡೆಯುವಂತೆ ಮಾಡಿದ್ದಾರೆ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಚನ್ನಪಟ್ಟಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಕ್ಕಳನ್ನು ಗೆಲ್ಲಿಸಲು ಶತಪ್ರಯತ್ನ ಮಾಡುತ್ತಿದ್ದು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಳೆದ ಮೂರು ನಾಲ್ಕು ತಿಂಗಳಿನಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಬಂದಿದ್ದರು. ಒಕ್ಕಲಿಗ ಸಮುದಾಯ ಪ್ರಬಲವಾಗಿರುವ ಕ್ಷೇತ್ರದಲ್ಲಿ ಗೆದ್ದು, ಒಕ್ಕಲಿಗ ಸಮುದಾಯದ ನಾಯಕ ಎನಿಸಿಕೊಳ್ಳಬೇಕು ಎಂದು ಗೆಲುವಿಗಾಗಿ ಎಲ್ಲಾ ಅಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ಮೂರು ಕ್ಷೇತ್ರಗಳನ್ನು ಗೆಲ್ಲಲು ಎಲ್ಲಾ ಸಚಿವರು, ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು ಒಂದು ತಿಂಗಳ ಮೊದಲೇ ಉಪಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿ ಕಡೆ ಗಮನ ಹರಿಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಆದರೆ ಈ ಸರ್ಕಾರಕ್ಕೆ ಜನರ ಹಿತ ಬೇಕಾಗಿಲ್ಲ ಎಂಬುದನ್ನು ಉಪಚುನಾವಣೆ ಮೂಲಕ ಸಾಬೀತು ಮಾಡಿದೆ ಎಂದರು.
ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಅಕ್ರಮ ಮಿತಿಮೀರಿದೆ. ಹಣ, ಹೆಂಡ, ಉಡುಗೊರೆಗಳನ್ನು ಎಗ್ಗಿಲ್ಲದೆ ಕೊಡಲಾಗುತ್ತಿದೆ. ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಮತದಾರರಿಗೆ ಧರ್ಮ ಗ್ರಂಥಗಳ ಜೊತೆ ಹಣವನ್ನು ಕೊಟ್ಟು ಆಣೆ, ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರು ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರು.
ಈ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಎಷ್ಟು ಪ್ರಕರಣ ದಾಖಲಾಗಿವೆ ಎನ್ನುವುದನ್ನು ರಾಜ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಬಹಿರಂಗಪಡಿಸಬೇಕು. ಇಷ್ಟೆಲ್ಲಾ ಅಕ್ರಮ ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವಾ, ಮೂರು ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ನಿಮಗೆ ಚುನಾವಣಾ ಅಕ್ರಮ ನಿಲ್ಲಿಸಲು ಸಾಧ್ಯವಾಗದಿದ್ದರೆ, ನ್ಯಾಯಯುತವಾಗಿ ಚುನಾವಣೆಯನ್ನು ನಡೆಸಲು ಆಗದಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಇಲ್ಲಿ ಗೂಂಡಾ ಪ್ರವೃತ್ತಿ ರಾಜಕಾರಣಿಗಳಿದ್ದು, ನಮಗೆ ನ್ಯಾಯಯುತವಾಗಿ ಚುನಾವಣೆ ಮಾಡಲು ಆಗುತ್ತಿಲ್ಲ ಎಂದು ಹೇಳಲಿ. ಉಪಚುನಾವಣೆಯನ್ನು ಕೂಡಲೇ ರದ್ದು ಮಾಡಲಿ ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಚುನಾವಣಾ ದಿನಾಂಕವನ್ನು ನಿಗದಿ ಮಾಡಿ. ದೇಶದಲ್ಲೇ ಪ್ರಾಮಾಣಿಕರಾದ ಐಎಎಸ್ ಅಧಿಕಾರಿಗಳನ್ನು ಕರೆತಂದು ನ್ಯಾಯಯುತವಾಗಿ ಚುನಾವಣೆ ನಡೆಸಿದರೆ, ನಿಜವಾದ ಪ್ರಜಾಪ್ರಭುತ್ವ ಫಲಿತಾಂಶ ಬರುತ್ತದೆ. ಇಲ್ಲವಾದಲ್ಲಿ ಹಣಬಲ , ತೋಲ್ಬಳದಿಂದ ನಡೆಸುವ ಚುನಾವಣೆಯಲ್ಲಿ ಬರುವ ಫಲಿತಾಂಶ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುತ್ತದೆ ಎಂದರು.
ರಾಜ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾರವರು, ಸಂಪೂರ್ಣ ವಿಫಲರಾಗಿದ್ದು, ಅವರನ್ನು ಕೂಡಲೇ ಎತ್ತಂಗಡಿ ಮಾಡಿ ದಕ್ಷ ಅಧಿಕಾರಿಯನ್ನು ನೇಮಕ ಮಾಡಿ ಎಂದು ಆಮ್ ಆದ್ಮಿ ಪಾರ್ಟಿ ವತಿಯಿಂದ ರಾಷ್ಟ್ರಪತಿಗಳು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದರು.
ಆಮ್ ಆದ್ಮಿ ಪಾರ್ಟಿ ಕರ್ನಾಟಕ ಸಾಮಾಜಿಕ ಮಾಧ್ಯಮ ವಿಭಾಗ ಮುಖ್ಯಸ್ಥ ದರ್ಶನ್ ಜೈನ್ ಮಾತನಾಡಿ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ಉಕ್ಕು ಕಂಪನಿಗಳಿಂದ 1000 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಆರೋಪ ಮಾಡಿದ್ದಾರೆ. ತಾನು ಸಭ್ಯಸ್ಥ ಎಂದು ಹೇಳಿಕೊಂಡು ಬೇರೆ ಪಕ್ಷಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿ ನಾಯಕರ ಮನೆ ಮೇಲೆ ದಾಳಿ ಮಾಡಿ ಯಾವ ಸಾಕ್ಷಿಗಳು ಇಲ್ಲದೇ ಇದ್ದರೂ ಅಕ್ರಮವಾಗಿ ಬಂಧಿಸಿ ಜೈಲಿನಲ್ಲಿಟ್ಟದ್ದ ಜಾರಿ ನಿರ್ದೇಶನಾಲಯ ಹೆಚ್ಡಿ ಕುಮಾರಸ್ವಾಮಿ ಮೇಲೆ ಅಷ್ಟೆಲ್ಲಾ ಆರೋಪ ಕೇಳಿ ಬಂದರೂ ಸುಮ್ಮನೆ ಇರೋದ್ಯಾಕೆ? ಜಾರಿ ನಿರ್ದೇಶನಾಲಯ ಏನು ಬಿಜೆಪಿ ಅಂಗ ಸಂಸ್ಥೆಯಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಮೇಲೆ 700 ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಕೇಳಿ ಬಂದರೂ, ರಾಜೀನಾಮೆ ಪಡೆಯದೇ ಸುಮ್ಮನೆ ಇರುವುದ್ಯಾಕೆ ಎಂದು ಪ್ರಶ್ನೆ ಮಾಡಿದರು.
ಅನಿಲ್ ನಾಚಪ್ಪ ಮಾತನಾಡಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಗುತ್ತಿದೆ, ಮತದಾರರು ಕೂಡ ಯಾವುದೇ ಅಭ್ಯರ್ಥಿಗಳಿಂದ ಹಣ ಪಡೆಯದೆ ನ್ಯಾಯಯುತವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.