ಒಂದೆಡೆ ಜಾತಿ ಜನಗಣತಿ, ಇನ್ನೊಂದೆಡೆ ಒಳಮೀಸಲಾತಿ ಜಾರಿಗೆ ಕೂಗು : ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು

ಒಂದೆಡೆ ಜಾತಿ ಜನಗಣತಿ, ಇನ್ನೊಂದೆಡೆ ಒಳಮೀಸಲಾತಿ ಜಾರಿಗೆ ಕೂಗು : ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು

ಬೆಂಗಳೂರು: ರಾಜ್ಯದಲ್ಲಿ ಈಗ ಜಾತಿ ಜನಗಣತಿಯ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಜಾತಿ ಜನಗಣತಿ ವರದಿ ಜಾರಿಗೊಳಿಸುವಂತೆ ಹಿಂದುಳಿದ ಸಮುದಾಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಇದರ ಮಧ್ಯೆ ಒಳಮೀಸಲಾತಿ ಜಾರಿಗೊಳಿಸುವ ಕೂಗೂ ಗಟ್ಟಿಯಾಗುತ್ತಿದೆ. ಜಾತಿ ಜನಗಣತಿ ಹಾಗೂ ಒಳಮೀಸಲಾತಿ ಜಾರಿಗೆ ಪರ ವಿರೋಧ ಬಲವಾಗಿರುವ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒತ್ತಡಕ್ಕೆ ಸಿಲುಕಿದೆ.

ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಂದೆ ದೊಡ್ಡ ಸವಾಲು ಎದುರಾಗಿದೆ. ಎರಡೂ ಜಾತಿ ಆಧಾರಿತ ನಿರ್ಧಾರಗಳು ರಾಜಕೀಯವಾಗಿ ವೈರುಧ್ಯಗಳನ್ನು ಹೊಂದಿರುವುದು ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ರಾಜಕೀಯವಾಗಿ ಲಾಭ, ನಷ್ಟದ ಲೆಕ್ಕಾಚಾರ ಹೊಂದಿರುವ ಜಾತಿ ಜನಗಣತಿ ಹಾಗೂ ಒಳಮೀಸಲಾತಿ ಜಾರಿಗೆ ಬಲವಾದ ಪರ – ವಿರೋಧ ಕೂಗುಗಳಿವೆ. ರಾಜಕೀಯವಾಗಿ ಹಿನ್ನಡೆಯಾಗದ ರೀತಿಯಲ್ಲಿ ಎರಡನ್ನೂ ಜಾರಿಗೊಳಿಸುವ ಅನಿವಾರ್ಯತೆ ರಾಜ್ಯ ಸರ್ಕಾರದ ಮೇಲಿದೆ.

ಕಾಂಗ್ರೆಸ್ ಅಹಿಂದ ನಾಯಕರು ಜಾತಿ ಗಣತಿ ಜಾರಿಗೆ ಪಟ್ಟು ಹಿಡಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿ ವರದಿ ಜಾರಿಯಿಂದ ಪ್ರಬಲ ಸಮುದಾಯದ ಜನರು ಕಾಂಗ್ರೆಸ್ ವಿರುದ್ಧ ನಿಲ್ಲುವ ಆತಂಕ ಹಲವರಲ್ಲಿದೆ. ಹೀಗಾಗಿ, ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಜಾರಿ ಸಂಬಂಧ ಉಪಸಮಿತಿ ರಚಿಸಿ, ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಜಾತಿವಾರು ಸಮೀಕ್ಷೆ ಜಾರಿಗೊಳಿಸಿದರೆ ಪ್ರಬಲ ಸಮುದಾಯದ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ ಸರ್ಕಾರದ್ದಾಗಿದೆ.

ರಾಜ್ಯ ಸರ್ಕಾರಕ್ಕೆ ಎದುರಾಗಿರುವ ಮತ್ತೊಂದು ಸವಾಲು ಒಳಮೀಸಲಾತಿ ಜಾರಿ. ದಲಿತ ಸಮುದಾಯದವರು ಅದರಲ್ಲೂ ಎಡ ಸಮುದಾಯದ ನಾಯಕರು ಒಳಮೀಸಲಾತಿ ಸಂಬಂಧ ಸದಾಶಿವ ಆಯೋಗದ ವರದಿ ಜಾರಿಗೆ ಪಟ್ಟುಹಿಡಿದಿದ್ದಾರೆ. ಒಳಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೆ ಈ ಸಂಬಂಧ ಇದ್ದ ಗೊಂದಲವನ್ನು ನಿವಾರಿಸಿತ್ತು. ಆಗಸ್ಟ್ 1ರಂದು ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ, ರಾಜ್ಯ ಸರ್ಕಾರಗಳು ಎಸ್ಸಿ ಸಮುದಾಯದಲ್ಲಿ ಹೆಚ್ಚು ಹಿಂದುಳಿದವರನ್ನು ಗುರುತಿಸಬಹುದು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯೊಳಗೆ ಪ್ರತ್ಯೇಕ ಕೋಟಾಗಳೊಂದಿಗೆ ಒಳಮೀಸಲಾತಿ ನೀಡಬಹುದು ಎಂದು ಮಹತ್ವದ ಆದೇಶ ನೀಡಿತ್ತು. ಆ ಮೂಲಕ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೇ ನೀಡಿದೆ.

Leave a Reply

Your email address will not be published. Required fields are marked *