ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದ ಎರಡೂ ದಿನಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶೇ 92.93ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಒಟ್ಟು 3,30,808 ಅಭ್ಯರ್ಥಿಗಳ ಪೈಕಿ ಗುರುವಾರ ನಡೆದ ಗಣಿತ ಪರೀಕ್ಷೆಯನ್ನು 3,04,186 (ಶೇ 91.95) ಹಾಗೂ ಜೀವ ವಿಜ್ಞಾನ ಪರೀಕ್ಷೆಯನ್ನು 2,63,867 ಅಭ್ಯರ್ಥಿಗಳ ಪೈಕಿ 2,39,848 (ಶೇ 90.90) ಮಂದಿ ಬರೆದಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬುಧವಾರ ನಡೆದ ಭೌತವಿಜ್ಞಾನ ವಿಷಯವನ್ನು 3,11,690 (ಶೇ 94.22) ಹಾಗೂ ರಸಾಯನ ವಿಜ್ಞಾನ ವಿಷಯವನ್ನು 3,11,690 (ಶೇ 94.25) ಮಂದಿ ಬರೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಗುರುವಾರದ ಪರೀಕ್ಷೆ ಕೂಡ ಸುಗಮವಾಗಿ ನಡೆದಿದೆ. ಎಲ್ಲಿಯೂ ಯಾವ ಸಮಸ್ಯೆಯೂ ಆಗಿಲ್ಲ. ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ವ್ಯವಸ್ಥೆ ಮೂಲಕವೇ ಎಲ್ಲ ಕಡೆಯೂ ಅಭ್ಯರ್ಥಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ