ಚಾಮರಾಜನಗರ: ಪೊಲೀಸ್ ಠಾಣೆಯ ಗೇಟ್ನ ಬೀಗ ಮುರಿದು ಒಳ ನುಗ್ಗಿ ಜಪ್ತಿ ಮಾಡಿ ಇಡಲಾಗಿದ್ದ ಬೈಕ್ ಕದ್ದಿರುವ ಘಟನೆ ಚಾಮರಾಜನಗರದ ಸಿಇಎನ್ ಠಾಣೆಯಲ್ಲಿ ನಡೆದಿದೆ. ಬೈಕ್ ಕದ್ದೊಯ್ದಿದ್ದ ಚಾಮರಾಜನಗರದ ಅರ್ಫಾಜ್ ಹಾಗೂ ಇಮ್ರಾನ್ ಎಂಬ ಆರೋಪಿಗಳನ್ನು ಪಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ತಡರಾತ್ರಿ ಅರ್ಫಾಜ್ ಮತ್ತು ಇಮ್ರಾನ್ ಕಾಂಪೌಂಡ್ ಹಾರಿ ಠಾಣಾ ಆವರಣಕ್ಕೆ ಬಂದು ಗೇಟಿನ ಬೀಗ ಮುರಿದಿದ್ದಾರೆ. ಬಳಿಕ, ಎನ್ಡಿಪಿಎಸ್ ಕಾಯ್ದೆಯಡಿ ಜಪ್ತಿ ಮಾಡಿದ್ದ ಹೊಂಡಾ ಶೈನ್ ಬೈಕ್ನ್ನು ಕದ್ದೊಯ್ದಿದ್ದರು. ಬೆಳಗ್ಗೆ ಠಾಣೆಗೆ ಬಂದ ಪೊಲೀಸರು ಗೇಟ್ನ ಬೀಗ ಇಲ್ಲದಿರುವುದನ್ನು ಕಂಡು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರು ಬೈಕ್ ಕದ್ದೊಯ್ದಿರುವುದು ಗೊತ್ತಾಗಿದೆ. ಕೂಡಲೇ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಇಬ್ಬರನ್ನು ಬಂಧಿಸಿ, ಬೈಕ್ ವಶಕ್ಕೆ ಪಡೆಯಲಾಗಿದೆ.