ಚನ್ನಪಟ್ಟಣ ಉಪಚುನಾವಣೆ, ನಿಖಿಲ್ ಬದಲು ಅವರ ಅಮ್ಮ ಕಣಕ್ಕೆ || ಎದುರಾಳಿಯಾಗಿ ಡಿ.ಕೆ ಸುರೇಶ್ ?

ಚನ್ನಪಟ್ಟಣ ಉಪಚುನಾವಣೆ, ನಿಖಿಲ್ ಬದಲು ಅವರ ಅಮ್ಮ ಕಣಕ್ಕೆ || ಎದುರಾಳಿಯಾಗಿ ಡಿ.ಕೆ ಸುರೇಶ್ ?

ಬೆಂಗಳೂರು : ಸೋಲುಗಳಿಂದ ಕೆಂಗೆಟ್ಟಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಚೆನ್ನಪಟ್ಟಣ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ. ಈ ಬೆಳವಣಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಹಿನ್ನೆಡೆ ಉಂಟು ಮಾಡಿದ್ದು, ಅವರ ಬದಲು ತಮ್ಮ ಪತ್ನಿ ಅನಿತಾ ಕುಮಾರ ಸ್ವಾಮಿ ಅವರನ್ನು ಕಣಕ್ಕಿಳಿಸಲು ಆಲೋಚನೆ ನಡೆಸಿದ್ದಾರೆ.

ಮತ್ತೊಂದೆಡೆ ಪ್ರತಿಷ್ಟೆಯ ಕಣವಾಗಿ ಪರಿಣಮಿಸಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡೆ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶತಾಯಗತಾಯ ಉಪಚುನಾವಣೆಯಲ್ಲಿ ಗೆದ್ದು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿರುವ ಅಭಿಮಾನಿಗಳ ಪಾಲಿನ ಸೈನಿಕ ಬುಧವಾರ ಬಿಜೆಪಿ ಕಾರ್ಯಕರ್ತರ ಜೊತೆ ಖಾಸಗಿ ರೆಸಾರ್ಟ್ನಲ್ಲಿ ಸಭೆ ನಡೆಸಿರುವುದು ಬಿಜೆಪಿ ಮಾತ್ರವಲ್ಲದೆ ಜೆಡಿಎಸ್‌ಗೂ ಇದು ಹಿನ್ನೆಡೆಯಾಗಿದೆ.

ಒಂದೆಡೆ, ಯುವ ಜೆಡಿಎಸ್ ಅಧ್ಯಕ್ಷ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಬೇಕೆಂಬ ಇಚ್ಛೆ ಇದೆಯಾದರೂ, ನಿಖಿಲ್ ಉತ್ಸಾಹ ತೋರುತ್ತಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ಚುನಾವಣೆಗೆ ರಾಮನಗರದಿಂದಲೇ ಸ್ಪರ್ಧಿಸುತ್ತೇನೆ, ಈಗ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸೋಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲುಂಟಾದರೆ ರಾಮನಗರ ಜಿಲ್ಲಾ ರಾಜಕಾರಣದ ಮೇಲಿನ ಹಿಡಿತ ತಪುö್ಪತ್ತದೆ ಎಂದು ಕಳವಳಗೊಂಡಿರುವ ಕುಮಾರಸ್ವಾಮಿ, ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸಿ ಕ್ಷೇತ್ರ ಉಳಿಸಿಕೊಳ್ಳುವ ಚಿಂತನೆಯಲ್ಲಿದ್ದಾರೆ.

ಈ ಮೊದಲು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದ್ದರು, ಆದರೆ, ಅವರಿಗೆ ಪಕ್ಷದಲ್ಲಿ ಒಲವು ವ್ಯಕ್ತವಾಗಲಿಲ್ಲ. ಯೋಗೇಶ್ವರ್ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನೂ ಎದುರಿಸುವ ಶಕ್ತಿ ಜಯಮುತ್ತು ಅವರಲ್ಲಿ ಇಲ್ಲ ಎಂಬ ಭಾವನೆ ಪಕ್ಷದ ಕಾರ್ಯಕರ್ತರಿಂದ ವ್ಯಕ್ತವಾದ ಕಾರಣ ಕುಮಾರಸ್ವಾಮಿ ಅಭ್ಯರ್ಥಿ ಬದಲಾವಣೆಗೆ ಮುಂದಾದರು ಎನ್ನಲಾಗಿದೆ. ರಾಮನಗರ ಜಿಲ್ಲೆ ಮೇಲಿನ ರಾಜಕೀಯ ಹಿಡಿತಕ್ಕೆ ಪೈಪೋಟಿ ನಡೆಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರತಿಷ್ಠೆಯಾಗಿದೆ.

ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದು ಪ್ರತಿಷ್ಠೆಯಾಗಿದ್ದರೂ, ಉಭಯ ನಾಯಕರಿಗೆ ತಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ದೊರೆಯದೇ ಗೊಂದಲದಲ್ಲಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮುನ್ನ ಕುಮಾರಸ್ವಾಮಿ ತಮ್ಮ ಪಕ್ಷದಿಂದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸುವ ರಣೋತ್ಸಾಹದಲ್ಲಿದ್ದರು. ಆದರೆ, ಶಿವಕುಮಾರ್ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದರೆ, ಮತ್ತೊಂದೆಡೆ ಮೈತ್ರಿ ಕೂಟದ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್, ಪಕ್ಷದಿಂದ ಟಿಕೆಟ್ ಸಿಗದಿದ್ದರೂ ಸ್ಪರ್ಧೆಗಿಳಿಯಲು ಮುಂದಾಗಿರುವುದು ಕುಮಾರಸ್ವಾಮಿ ನಿರ್ಧಾರ ಬದಲಾವಣೆಗೆ ಕಾರಣವಾಗಿದೆ.

ಚುನಾವಣೆಗೂ ಮುನ್ನ ತಾವೇ ಅಭ್ಯರ್ಥಿ ಎನ್ನುತ್ತಿದ್ದ ಶಿವಕುಮಾರ್, ಇದೀಗ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದ್ದು, ಪಕ್ಷದ ಕಾರ್ಯಕರ್ತರೊಬ್ಬರನ್ನು ಅಭ್ಯರ್ಥಿಯನ್ನಾಗಿಸಲು ಮುಂದಾಗಿದ್ದಾರೆ. ಯೋಗೇಶ್ವರ್ ನಿರ್ಧಾರದ ನಂತರ ಕುಮಾರಸ್ವಾಮಿ, ತಮ್ಮ ಪತ್ನಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕುಮಾರಸ್ವಾಮಿ, ಕ್ಷೇತ್ರದ ಮುಖಂಡರೊAದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಒಂದೆರಡು ದಿನದಲ್ಲಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ.

ಸಿ.ಪಿ.ಯೋಗೇಶ್ವರ್ ಅವರು ಇಂದು ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಚುನಾವಣೆಗೆ ಉಮೇದುವಾರಿಕೆ ಮಾಡುವಂತೆ ಸಭೆಯಲ್ಲಿ ಒತ್ತಡ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಪಕ್ಷವು ಅಸ್ತಿತ್ವದಲ್ಲೇ ಉಳಿಯುವುದಿಲ್ಲ. ಕೊನೆ ಕ್ಷಣದವರೆಗೂ ಟಿಕೆಟ್‌ಗೆ ಪ್ರಯತ್ನಿಸಬೇಕು. ಒಂದು ವೇಳೆ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಿಂದೇಟು ಹಾಕಬಾರದೆಂದು ಸಲಹೆ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಾವು ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಮಂಜುನಾಥ್ ಅವರಿಗೆ ಸಂಪೂರ್ಣವಾಗಿ ಬೆಂಬಲ ನೀಡಿದ್ದೆವು. ಕಡೆಪಕ್ಷ ಅದಕ್ಕಾದರೂ ಕುಮಾರಸ್ವಾಮಿಯವರು ಕ್ಷೇತ್ರವನ್ನು ಬಿಟ್ಟುಕೊಡಬೇಕಿತ್ತು. ತಮ ಪುತ್ರನನ್ನು ಕಣಕ್ಕಿಳಿಸುವ ಒಂದೇ ಉದ್ದೇಶದಿಂದ ತಮಗೆ ಕ್ಷೇತ್ರ ಬಿಟ್ಟುಕೊಡಬೇಕೆಂದು ವರಿಷ್ಠರ ಬಳಿ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಬಗ್ಗದೆ ನೀವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ. ಗೆಲ್ಲಿಸಿಕೊಡುವ ಜವಾಬ್ದಾರಿ ನಮದು ಎಂದು ಕಾರ್ಯಕರ್ತರು ವಾಗ್ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ವರಿಷ್ಠರು ಕೂಡ ನನಗೆ ಟಿಕೆಟ್ ನೀಡಬೇಕೆಂಬ ಇಚ್ಛೆ ಹೊಂದಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟುಕೊಟ್ಟರೆ ರಾಮನಗರ ಜಿಲ್ಲೆಯಲ್ಲಿ ತಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಸಭೆಯಲ್ಲಿ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *