ಕೂದಲು ಅಂದಾಕ್ಷಣ ಪ್ರತಿಯೊಬ್ಬರ ಕೈಗಳು ಒಂದು ನಿಮಿಷ ತಮ್ಮ ತಲೆಯ ಮೇಲೆ ಹೋಗುವುದರಲ್ಲಿ ಅನುಮಾನವೇ ಬೇಡ. ಏಕೆಂದರೆ, ಅಷ್ಟರ ಮಟ್ಟಿಗೆ ತಮ್ಮ ಕೇಶರಾಶಿಗೆ ಪ್ರಾಮುಖ್ಯತೆ ಕೊಡುತ್ತಾರೆ ನಮ್ಮ ಜನ. ಮನುಷ್ಯನಿಗೆ ಮುಖದ ಅಂದ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸುಂದರವಾದ ಕೂದಲು.
ರೇಷ್ಮೆಯಂತ ಕೇಶರಾಶಿಗೆ ಮನಸೋಲದವರಿಲ್ಲ. ಅದರಲ್ಲೂ ಹೆಣ್ಣು ಮಕ್ಕಳ ಸೊಂಪಾದ ದಟ್ಟವಾದ ಕೂದಲನ್ನು ನೋಡುವುದು ನಿಜಕ್ಕೂ ಕಣ್ಣಿಗೆ ಆನಂದ. ಆದರೆ, ಕೂದಲು ಉದುರುವಿಕೆ ಸಮಸ್ಯೆ ಎಂಥವರನ್ನು ಭಾರೀ ಬೇಸರಕ್ಕೆ ದೂಡುವುದರಲ್ಲಿ ಆಶ್ಚರ್ಯವಿಲ್ಲ. ಈ ಹೇರ್ ಫಾಲ್ ಸಮಸ್ಯೆ ಇಂದು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಬಾಧಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಹೇರ್ ಫಾಲ್ಗೆ ಕಾರಣಗಳೇನು?
ದಟ್ಟವಾದ, ಸೊಂಪಾದ, ಉದ್ದನೆಯ ಕೂದಲು ಬಿಡುವುದು ಎಂದರೆ ಮಹಿಳೆಯರಿಗೆ ಭಾರೀ ಖುಷಿ. ಇದು ಮಹಿಳೆಯರ ಅಂದವನ್ನು ದುಪ್ಪಟ್ಟು ಮಾಡುತ್ತದೆ ಎಂಬುದು ಸತ್ಯ ಸಂಗತಿಯೇ. ಆದರೆ, ಬೆಂಬಿಡದೆ ಕಾಡುವ ಹೇರ್ ಫಾಲ್ ತೊಂದರೆ ದಟ್ಟವಾದ, ಸುಂದರ ಕೂದಲಿನ ಬೆಳವಣಿಗೆಗೆ ಬ್ರೇಕ್ ಹಾಕುತ್ತದೆ. ಇಂದಿನ ಕಾಲಘಟ್ಟದಲ್ಲಿ ಮಹಿಳೆಯರಲ್ಲಿ ಹಲವು ಕಾರಣಗಳಿಗೆ ಈ ಕೂದಲು ಉದುರುವಿಕೆ ಸಮಸ್ಯೆ ಉಲ್ಬಣಿಸುತ್ತದೆ. ಇದರಿಂದ ಬೇಸತ್ತ ಹೆಣ್ಣುಮಕ್ಕಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ಮತ್ತು ಜಾಹೀರಾತುಗಳಲ್ಲಿ ಕಾಣಸಿಗುವ ಆಕರ್ಷಕ ಉತ್ಪನ್ನಗಳನ್ನು ಖರೀದಿ ಮಾಡಿ, ಅದನ್ನೊಮ್ಮೆ ಬಳಸಿ, ಮತ್ತಷ್ಟು ಕೂದಲನ್ನು ಕಳೆದುಕೊಂಡ ನಿದರ್ಶನಗಳು ಇವೆ.
ಹೇರ್ ಫಾಲ್ಗೆ ಕಾರಣಗಳೇನು?
ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಸಾಮಾನ್ಯ ಕಾರಣಗಳು ಹಾರ್ಮೋನ್ ಅಸಮತೋಲನ (ಗರ್ಭಧಾರಣೆ, ಋತುಬಂಧ ಅಥವಾ ಥೈರಾಯ್ಡ್ ಸಮಸ್ಯೆಗಳು), ಒತ್ತಡ, ಪೌಷ್ಟಿಕಾಂಶದ ಕೊರತೆಗಳು, ತಳಿಶಾಸ್ತ್ರ (Genetics) ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ನಂತಹ ಕೆಲವು ವೈದ್ಯಕೀಯಕ್ಕೆ ಸಂಬಂಧಪಟ್ಟ ವಿಷಯಗಳು. ಕಠಿಣ ಕೂದಲ ರಕ್ಷಣೆಯ ಉತ್ಪನ್ನಗಳು ಮತ್ತು ಸ್ಟೈಲಿಂಗ್ ಉಪಕರಣಗಳು ಕೂಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಪರಿಣಾಮಕಾರಿ ಚಿಕಿತ್ಸೆಗಾಗಿ ಹಾಗೂ ಮೂಲ ಕಾರಣ ತಿಳಿಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿ ಮತ್ತು ಸೂಕ್ತ ಸಲಹೆ ಪಡೆಯುವುದು ಉತ್ತಮ.