ಬೆಂಗಳೂರು ; ಮಾವಿನ ಹಣ್ಣು ಎಲ್ಲರಿಗೂ ಇಷ್ಟವಾಗುವ ಹಣ್ಣು. ಮಾವಿನ ಹಣ್ಣಿನ ಸೀಸನ್ ಶುರುವಾದ್ರೆ ಸಾಕು ಬೇಡಿಕೆ ಹೆಚ್ಚಳವಾಗುತ್ತದೆ. ವಿವಿಧ ಮಾವಿನ ತಳಿಗಳಾದ ಬಾದಾಮಿ, ಸಿಂಧೂರ, ರಸಪುರ, ಬೈಗಂಪಲ್ಲಿ, ಕೇಸರ್, ಮಲ್ಲಿಕಾ, ಇಮಾಮ್ ಪಸಂದ್, ಮಲಗೋ ಶುಗರ್ ಬೇಬಿ, ಕಲ ಇಷಾದ್ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಾವಿನ ದರ ಕಳೆದ ಬಾರಿಗಿಂತ ಸ್ವಲ್ಪ ದುಬಾರಿ ಆದರೂ ವರ್ಷಕ್ಕೊಮ್ಮೆ ಸಿಗುವ ಮಾವಿನ ಸವಿಯಿಂದ ತಪ್ಪಿಸಿಕೊಳ್ಳಲು ಇಚ್ಛಿಸದ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ.

ಆದರೆ ನೋಡಲು ಚೆನ್ನಾಗಿದೆ, ಹಣ್ಣಾಗಿದೆ, ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಯಮಾರಿದರೆ ಆರೋಗ್ಯ ಹದಗೆಡುವುದು ಪಕ್ಕಾ. ಏಕೆಂದರೆ, ರಾಸಾಯನಿಕಗಳನ್ನು ಬಳಸಿ ಮಾವನ್ನು ಹಣ್ಣಗಿಸುವ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಈ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಮತ್ತು ರಾಸಾಯನಿಕ ಬಳಕೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಮಾವು ಖರೀದಿಸುವ ವಿಚಾರದಲ್ಲಿ ಆರೋಗ್ಯ ತಜ್ಞರು ಕೂಡ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಮಾವಿನ ಹಣ್ಣುಗಳನ್ನು ಖರೀದಿಸುವಾಗ ಅದು ಪರಿಶುದ್ಧವಾಗಿದೆಯೇ ಎಂದು ಪರಿಶೀಲಿಸಿಕೊಳ್ಳುವಂತೆ ಆಹಾರ ತಜ್ಞರು ಸಲಹೆ ನೀಡಿದ್ದಾರೆ. ಹಣ್ಣನ್ನು ಮಾಗಿಸಲು ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳಿದ್ದು, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ರಾಸಾಯನಿಕಗಳಿಂದ ಹಣ್ಣಾದ ಮಾವು ಸೇವನೆಯಿಂದ ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಿಂದ ಹಿಡಿದು ದೀರ್ಘಕಾಲಿಕ ಸಮಸ್ಯೆಗಳು ಕಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು, ಆಹಾರ ಸುರಕ್ಷತೆ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಅದೇ ರೀತಿ ಸಾರ್ವಜನಿಕರು ಕೂಡ ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಉತ್ತಮ.