ಮಳೆಯಿಂದ ಸಮಸ್ಯೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ- ಮುಖ್ಯ ಆಯುಕ್ತರಾದ Maheshwar Rao

ಮಳೆಯಿಂದ ಸಮಸ್ಯೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ- ಮುಖ್ಯ ಆಯುಕ್ತರಾದ Maheshwar Rao

ಬೆಂಗಳೂರು: ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಸಾಯಿ ಲೇಔಟ್  ಜಲಾವೃತವಾಗುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದರು.

ನಗರದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಸಮಸ್ಯೆಯಾಗಿರುವ ಪ್ರದೇಶಗಳಿಗೆ ಭೇಟಿ ನಿಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಗರದಲ್ಲಿ ಜೋರು ಮಳೆಯಾಗಿದ್ದು, ಅಧಿಕಾರಿಗಳೆಲ್ಲಾ ರಾತ್ರಿ 1 ಗಂಟೆಯವರೆಗೆ ಫೀಲ್ಡ್ ನಲ್ಲೇ ಇದ್ದು, ಮೇಲ್ವಿಚಾರಣೆ ಮಾಡಿ ಇರುವ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ತಿಳಿಸಿದರು.

ಸಾಯಿ ಲೇಔಟ್ ಪ್ರದೇಶವನ್ನು ಬಿ.ಡಿ.ಎ. ಅಭಿವೃದ್ಧಿಪಡಿಸಿದ್ದು, ಬಿ.ಡಿ.ಎ ಅಧಿಕಾರಿಗಳ ಜೊತೆ ಸಭೆ ನಡೆಸಿ ಇರುವ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿ.ಡಿ.ಎ ವತಿಯಿಂದ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಜಾಕ್ ವೆಲ್ ವ್ಯವಸ್ಥೆ ಮಾಡಿ ಪಂಪ್ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸಾಯಿ ಲೇಔಟ್ ಪ್ರದೇಶವು ರಾಜಕಾಲುವೆಗಿಂದ ತುಂಬಾ ಕೆಳ ಮಟ್ಟದಲ್ಲಿರುವ ಕಾರಣ ಜಲಾವೃತವಾಗುತ್ತಿದೆ. ಜೊತೆಗೆ ರಾಜಕಾಲುವೆ ಹಾದುಹೋಗುವ ಜಾಗದಲ್ಲಿ ರೈಲ್ವೆ ವೆಂಟ್ ಸಣ್ಣದಾಗಿರುವ ಪರಿಣಾಮ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಈ ಸಂಬಂಧ ಈಗಾಗಲೇ ರೈಲ್ವೆ ಇಲಾಖೆ ಜೊತೆ ಸಮನ್ವಯ ಸಾಧಿಸಿ ರೈಲ್ವೆ ವೆಂಟ್ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪರಿಶೀಲನೆಯ ವೇಳೆ ಸಾಯಿ ಲೇಔಟ್ ಸ್ಥಳಿಯರ ಅಹವಾಲುಗಳನ್ನು ಆಲಿಸಲಾಗಿದ್ದು, ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ ಮಳೆಗಾಲ ಮುಗಿಯುವವರೆಗೂ ತಾತ್ಕಾಲಿಕವಾಗಿ ಸಂಪ್ ನಿರ್ಮಿಸಿ ಅಲ್ಲಿ ತುಂಬುವ ನೀರನ್ನು ಹೊರ ಹಾಕಲು ಪಂಪ್ ಸೆಟ್ ವ್ಯವಸ್ಥೆ ಮಾಡಿ ಅದನ್ನು ನೋಡಿಕೊಳ್ಳಲು ಒಂದು ತಂಡವನ್ನು ಕೂಡಾ ನಿಯೋಜಿಸಲಾಗುವುದು. ವಿಪತ್ತು ನಿರ್ವಹಣೆ ಅಡಿ ನೀರು ನುಗ್ಗಿರುವ ಮನೆಗಳನ್ನು ಗುರುತಿಸಿ ಪರಿಹಾರ ನೀಡಲಾಗುವುದು ಎಂದರು.

ರಾಜಕಾಲುವೆಯಲ್ಲಿ ನಿರಂತರವಾಗಿ ಹೂಳೆತ್ತಿ ಸ್ವಚ್ಛತೆ ಕಾಪಾಡಿಕೊಂಡು ಸರಾಗವಾಗಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಲಾಗುವುದೆಂದು ಹೇಳಿದರು.

ಟ್ರ್ಯಾಕ್ಟರ್ ಮೂಲಕ ಸಾಯಿ ಲೇಔಟ್ ವೀಕ್ಷಣೆ:

ಸಾಯಿ ಲೇಔಟ್ ನಲ್ಲಿ ಜಲಾವೃತ ಆಗಿರುವ ಪ್ರದೇಶವನ್ನು ಟ್ರ್ಯಾಕ್ಟರ್ ಮೂಲಕ ಪರಿಶೀಲನೆ ನಡೆಸಿ, ಎಲ್ಲೆಲ್ಲಿ ನೀರು ನಿಂತಿದೆಯೋ ಅದನ್ನೆಲ್ಲಾ ಪಂಪ್ ಗಳ ಮೂಲಕ ತ್ವರಿತವಾಗಿ ನೀರು ಹೊರ ಹಾಕುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಮಾನ್ಯತಾ ಟೆಕ್ ಪಾರ್ಕ್ ಬಳಿ ಪರಿಶೀಲನೆ:

ಮಾನ್ಯತಾ ಟೆಕ್ ಬಳಿ ಬರುವ ಮಾನ್ಫೋ ಹತ್ತಿರ ರಾಜಕಾಲುವೆ ಸಂಪರ್ಕ ಸರಿಯಾಗಿಲ್ಲದ ಕಾರಣ ಜಲಾವೃತವಾಗುತ್ತದೆ. ಈ ಸಂಬಂಧ ಹೊಸದಾಗಿ ಮಳೆ ನೀರುಗಾಲುವೆ ನಿರ್ಮಾಣ ಮಾಡುವ ಸಲುವಾಗಿ ಮಾನ್ಯತಾ, ಇ.ಬಿ.ಸ್ ಐಟಿ ಪಾರ್ಕ್, ಮ್ಯಾನ್ಫೋ, ಕಾರ್ಲೆ ಇನ್ಫಾಟೆಕ್ ಜೊತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಾಗವಾರ ಜಂಕ್ಷನ್ ಬಳಿ ಪರಿಶೀಲನೆ:

ನಾಗವಾರ ಜಂಕ್ಷನ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಈ ಜಂಕ್ಷನ್ ನಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು ಮಳೆ ನೀರುಗಾಳುವೆಯಲ್ಲಿ ನಿರಂತರವಾಗಿ ಸ್ವಚ್ಛತೆ ಕಾಪಾಡಲು ಮೆಟ್ರೋ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಕ್ರಾಸ್ ಕಲ್ವರ್ಟ್ ಕಾಮಗಾರಿ ಮಾಡಲು ಸೂಚಿಸಲಾಯಿತು.

ಇದೇ ವೇಳೆ ಥಣಿಸಂದ್ರದ ಬಳಿ ಮಳೆ ನೀರುಗಾಲುವೆಯಿಂದ ಹೂಳೆತ್ತಿದ್ದು, ಈಗಾಗಲೇ ಸುಮಾರು 20 ಲೋಡ್ ಹೂಳನ್ನು ತೆರವುಗೊಳಿಸಲಾಗಿದೆ. ಬಾಕಿಯಿರುವ ಹೂಳನ್ನು ಕೂಡಾ ತ್ವರಿತವಾಗಿ ತೆರವುಗೊಳಿಸಬೇಕು. ಮಳೆ ನೀರುಗಾಲುವೆ ಮೇಲೆ ಸ್ಲ್ಯಾಬ್ ಗಳನ್ನು ಅಳಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆಯ ವೇಳೆ ಮಹದೇವಪುರ ವಲಯ ಆಯುಕ್ತರಾದ ರಮೇಶ್, ಯಲಹಂಕ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿಮ್, ಕಾರ್ಯಪಾಕಲಕ ಅಭಿಯಂತರು, ಪಾಲಿಕೆ ಹಾಗೂ ಮೆಟ್ರೋ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *