ಚಿಕ್ಕಬಳ್ಳಾಪುರ: ಪ್ರಸಿದ್ಧ ಗಿರಿಧಾಮ ನಂದಿಬೆಟ್ಟಕ್ಕೆ ಪ್ರವಾಸಿಗರು ಒಂದು ತಿಂಗಳು ಭೇಟಿ ನೀಡುವಂತಿಲ್ಲ. ಆದರೆ ವಾರಾಂತ್ಯದಲ್ಲಿ ಗಿರಿಧಾಮ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ರಸ್ತೆ ದುರಸ್ತಿ ಕಾರ್ಯ: ನಂದಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಮಾರ್ಚ್ 24ರಿಂದ ಏಪ್ರಿಲ್ 25ರವರೆಗೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶಿಸಿದ್ದಾರೆ. ವಾರಾಂತ್ಯದಲ್ಲಿ ಶುಕ್ರವಾರ ಸಂಜೆ 6.30ರಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ನಿರ್ಬಂಧ ಸಡಿಲಿಸಲಾಗಿದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಗಿರಿಧಾಮಕ್ಕೆ ಹೋಗಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಂದಿ ತಪ್ಪಲಿನಿಂದ ಬೆಟ್ಟದವರೆಗೆ ಡಾಂಬರೀಕಣ ಕಾಮಗಾರಿಯನ್ನು ಪಿಡಬ್ಲ್ಯುಡಿ ಇಲಾಖೆ ಕೈಗೆತ್ತಿಕೊಂಡಿದ್ದು, ಬೆಟ್ಟದ ರಸ್ತೆಯಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಕಾಮಗಾರಿ ಸುಗಮ ಮತ್ತು ಶೀಘ್ರದಲ್ಲಿ ಪೂರ್ಣಗೊಳಿಸಲು ಈ ಕ್ರಮ ಕೈಗೊಂಡಿದ್ದೇವೆ. ಪ್ರವಾಸಿಗರು ವಾರದ ದಿನಗಳಲ್ಲಿ ಬೆಟ್ಟಕ್ಕೆ ಬರಬಾರದು. ಆದರೆ ವಾರಾಂತ್ಯದಲ್ಲಿ ಶುಕ್ರವಾರ ಸಂಜೆ, ಶನಿವಾರ, ಭಾನುವಾರ ಮುಕ್ತವಾಗಿ ಭೇಟಿ ನೀಡಬಹುದು. ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಪಿಡಬ್ಲ್ಯುಡಿ ಅವರಿಗೂ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣವಾದರೆ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.