ಚಿಕ್ಕಮಗಳೂರು: ಕೆಲ ತಿಂಗಳ ಹಿಂದೆ ಮಾವೋವಾದಿಗಳ ಶರಣಾಗತಿಯೊಂದಿಗೆ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ. ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ನಕ್ಸಲರಿಗೆ ಸೌಲಭ್ಯಗಳನ್ನು ನೀಡುವುದಾಗಿ ಮತ್ತು ಅವರ ಹಲವು ಬೇಡಿಕೆ ಈಡೇರಿಸುವುದಾಗಿ ಸರ್ಕಾರ ತಿಳಿಸಿದೆ. ಈ ಹಿನ್ನೆಲೆ ಕಳಸ ತಾಲೂಕಿನ ಬುಡಕಟ್ಟು ಜನಾಂಗದವರು, ನಾವು ನಕ್ಸಲ್ ಆಗಬೇಕಿತ್ತು, ಆಗ ನಮಗೂ ಸೌಲಭ್ಯ ಸಿಗ್ತಿತ್ತು ಎಂದು ನಕ್ಸಲರ ಹೆಜ್ಜೆ ಗುರುತುಗಳನ್ನ ಮೆಲುಕು ಹಾಕಿದ್ದಾರೆ.

ಹೌದು, ಜಿಲ್ಲೆಯ ಕಳಸ ತಾಲೂಕಿನ ಹೊಳೆಕೂಡಿಗೆ, ಹಾದಿಓಣಿ ಗ್ರಾಮದ ಬುಡಕಟ್ಟು ಜನಾಂಗದವರು ಸೇತುವೆ ಇಲ್ಲದ ಕಾರಣ ಕಳೆದ 50 ವರ್ಷಗಳಿಂದ ತೆಪ್ಪದಲ್ಲೇ ಭದ್ರಾ ನದಿ ದಾಟುತ್ತಿದ್ದಾರೆ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೆ ತೆಪ್ಪದಲ್ಲೇ ಕರೆದುಕೊಂಡು ಹೋಗಬೇಕು. ಯಾರಾದರೂ ಮೃತಪಟ್ಟರೇ ಅವರನ್ನು ತೆಪ್ಪದ ಲ್ಲೇ ಸಾಗಿಸ್ಬೇಕಾಗಿದೆ. ಹೀಗಾಗಿ ನಮಗೊಂದು ಸೇತುವೆ ಅಥವಾ ತೂಗುಸೇತುವೆ ನಿರ್ಮಿಸಿಕೊಡಿ ಎಂದು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಅಧಿಕಾರಿಗಳು – ರಾಜಕಾರಣಿಗಳ ಭರವಸೆಯ ಮಾತಿಗೆ ನೊಂದು-ಬೆಂದು ಇಂದು ನಕ್ಸಲರೇ ಸರಿ. ನಾವು ಅವರ ಹಾದಿ ತುಳಿದಿದ್ರೆ ಸೌಲಭ್ಯ ಸಿಗ್ತಿತ್ತು ಎಂದು ನಕ್ಸಲರನ್ನು ನೆನಪಿಸಿಕೊಳ್ಳುವ ಮೂಲಕ ತಮ್ಮ ಕೋಪವನ್ನು ಹೊರ ಹಾಕಿದ್ದಾರೆ.
ತೆಪ್ಪದಲ್ಲೇ ಜೀವನ ದೂಡುವ ಜನರು: ಮಳೆಗಾಲದಲ್ಲಿ ಭದ್ರೆ ತನ್ನ ರೌದ್ರಾವತಾರ ತೋರಿಸುತ್ತಾಳೆ. ಅಂತಹ ಭದ್ರೆಯ ಒಡಲಲ್ಲೇ ಬುಡಕಟ್ಟು ಜನಾಂಗದವರು ತೆಪ್ಪದಲ್ಲೇ ಜೀವನ ದೂಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಗ್ರಾಮದ ವೃದ್ಧೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಗ ತೆಪ್ಪದಲ್ಲೇ ಗ್ರಾಮಕ್ಕೆ ಸಾಗಿಸಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಹಾಗಾಗಿ, ಐದು ದಶಕಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆಯ ಮಾತು ಕೇಳಿ ಕೇಳಿ ಸಾಕಾಗಿದೆ, ಇನ್ಮುಂದೆ ಯಾರಿಗೂ ಮನವಿ ಕೊಡಲ್ಲ. ರಸ್ತೆ, ಸೇತುವೆ ಕೇಳಲ್ಲ. ನಮಗೆ ದಯಾಮರಣ ಕೊಡಿ ಎಂದು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.
ನಮ್ಮ ಕಷ್ಟ ನೋಡಲಾಗದೇ NDRFನವರು ಒಂದು ತೆಪ್ಪ ನೀಡಿದ್ದರು ಎಂದು ನಕ್ಸಲರ ಜೊತೆ NDRFನವರನ್ನು ನೆನೆದಿದ್ದಾರೆ
