ಚಿಕ್ಕನಾಯಕನಹಳ್ಳಿ || ಕಾಡು ಹಂದಿ ಅಡ್ಡ ಬಂದು ಆಟೋ ಪಲ್ಟಿ  : ಚಾಲಕ ಸೇರಿ ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲು

ಚಿಕ್ಕನಾಯಕನಹಳ್ಳಿ || ಕಾಡು ಹಂದಿ ಅಡ್ಡ ಬಂದು ಆಟೋ ಪಲ್ಟಿ : ಚಾಲಕ ಸೇರಿ ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲು

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ತರಬೇನಹಳ್ಳಿ-ಗೋಡೆಕೆರೆ ಗೇಟ್ ಮಧ್ಯದಲ್ಲಿರುವ ಅರಣ್ಯ ಇಲಾಖೆಯ ನರ್ಸರಿ ಬಳಿ ಕಾಡುಹಂದಿ ಅಡ್ಡಬಂದ ಪರಿಣಾಮ ಚಿಕ್ಕನಾಯಕನಹಳ್ಳಿ ಕಡೆ ಸಾಗುತ್ತಿದ್ದ ಪ್ರಯಾಣಿಕರ ಆಟೋ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಉರುಳಿ ಬಿದ್ದಿದೆ.

ಆಟೋದಲ್ಲಿ ಚಾಲಕ ಚಂದ್ರಶೇಖರ್ ಸೇರಿದಂತೆ ಮೂವರು ಗಾರ್ಮೆಂಟ್ಸ್ ನೌಕರ ಮಹಿಳೆಯರು ಪ್ರಯಾಣಿಸುತ್ತಿದ್ದರು. ಕಂದಿಕೆರೆ, ಸಾದರಹಳ್ಳಿ ಮೂಲದ ಆಟೋ ಚಾಲಕ ಚಂದ್ರಶೇಖರ್ (35) ಹಾಗೂ ಗೌರಸಾಗರ ತಿಮ್ಮನಹಳ್ಳಿ ಗ್ರಾಮದ ವಸಂತಮ್ಮ (33), ಮಂಜುಳ (29), ಶೋಭಾ (30) ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಗಾಯಾಳುಗಳು ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ ಡಾ.ಉಮೇಶ್ ಆಟೋದಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಅದನ್ನು ಶಿಫಾರಸ್ಸು ಮಾಡಲಾಗುವುದು ಎಂದರು.

ಕಿಬ್ಬನಹಳ್ಳಿ ಕ್ರಾಸ್ ಬಳಿಯರಿರುವ ಮ್ಯಾಫ್ ಗಾರ್ಮೆಂಟ್ಸ್ ಹೆಸರಿನ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಲು ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಮ್ಮನಹಳ್ಳಿ, ಕಂದಿಕೆರೆ ಹಾಗೂ ಶೆಟ್ಟಿಕೆರೆ ಭಾಗದಿಂದ ಪ್ರತಿನಿತ್ಯ ಬೆಳಗ್ಗೆ ಸಾವಿರಾರು ಮಹಿಳೆಯರು ತೆರಳುತ್ತಾರೆ. ಅವರನ್ನು ಸಾಗಿಸಲು ಇರುವ ಏಕೈಕ ವ್ಯವಸ್ಥೆಯೆಂದರೆ ಖಾಸಗಿ ಆಟೋಗಳು. ಆ ಆಟೋ ಚಾಲಕರು ಕೆಲಸದ ಸಮಯಕ್ಕೆ ಸರಿಯಾಗಿ ಫ್ಯಾಕ್ಟರಿಗೆ ತಲುಪುವುದಕ್ಕೋಸ್ಕರ ಪೈಪೋಟಿಯ ವೇಗದಲ್ಲಿ ಆಟೋ ಚಾಲನೆ ಮಾಡುತ್ತಾರೆ. ಹೀಗಾಗಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಕಿಬ್ಬನಹಳ್ಳಿ- ಚಿಕ್ಕನಾಯಕನಹಳ್ಳಿ, ಹುಳಿಯಾರು ಮಾರ್ಗದ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುವ ಹಲವು ಮುಖ್ಯ ಅಂಶಗಳಲ್ಲಿ ಇದೂ ಒಂದು ಮುಖ್ಯ ಅಂಶವಾಗಿದೆ.

Leave a Reply

Your email address will not be published. Required fields are marked *