ಬೆಂಗಳೂರು: ಆರ್ಸಿಬಿ ತಂಡ ಟ್ರೋಫಿ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಸಂಬಂಧ ಇಂದು (ಜೂನ್ 6) ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಎಂಎಲ್ಸಿ ಗೋವಿಂದರಾಜು ಅವರಿಗೆ ಗೇಟ್ ಪಾಸ್ ನೀಡಲಾಗಿದೆ.

ಈಗಾಗಲೇ ಗುರುವಾರ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್, ಎಸಿಪಿ ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರಿಕೆಟ್ ಸ್ಟೇಡಿಯಂನ ಇನ್ಚಾರ್ಜ್ ಅವರನ್ನು ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಎಂಎಲ್ಸಿ ಗೋವಿಂದರಾಜು ಅವರಿಗೆ ಕೋಕ್ ನೀಡಲಾಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿಗೆ ಗೇಟ್ ಪಾಸ್ ಯಾಕೆ?: ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಸಿಎಂ ಮೇಲೆ ಒತ್ತಡ ಹೇರಿದ ಕಾರಣ ಗೋವಿಂದರಾಜು ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೇಟ್ ಪಾಸ್ ನೀಡಲಾಗಿದೆ. ಗೋವಿಂದರಾಜು ಅವರು ಸದ್ಯ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದಾರೆ. ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೂಲಕ ಕಾರ್ಯಕ್ರಮ ಆಯೋಜನೆ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಸರ್ಕಾರವು ಗೋವಿಂದರಾಜು ಒತ್ತಡದಿಂದಲೇ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ ಎಂದು ಗೋವಿಂದರಾಜು ವಿರುದ್ದ ಸಿಎಂ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ತೆರವುಗೊಳಿಸಿ ಸಿದ್ದರಾಮಯ್ಯ ಅವರು ಆದೇಶ ಮಾಡಿದ್ದಾರೆ. ಅಲ್ಲದೆ, ಈ ಘಟನೆ ಸಂಬಂಧ ಕರ್ನಾಟಕ ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. 2023 ಚುನಾವಣೆ ನಂತರ ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗಿನಿಂದ ರಾಜಕೀಯ ಕಾರ್ಯದರ್ಶಿಯಾಗಿ ಗೋವಿಂದರಾಜ್ ಜೊತೆಗಿದ್ದರು. ಅಲ್ಲದೆ, ಸಿಎಂನ ರಾಜಕೀಯ ಚಟುವಟಿಕೆಗಳನ್ನು ನಿಗಾವಹಿಸುತ್ತಿದ್ದರು. ಇವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿತ್ತು. ಸದ್ಯ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರ್ಘಟನೆ ಸಂಭವಿಸಿದ್ದು, ಇದಕ್ಕೆ ಸರ್ಕಾರವೇ ಹೊಣೆ ಎಂದು ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಸಿಎಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದು, ರಾಜಕೀಯ ಕಾರ್ಯದರ್ಶಿ ಬದಲಾವಣೆ ಮುಂದಾಗಿದ್ದಾರೆ. ಸದ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಗೋವಿಂದರಾಜ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಸ್ಥಾನಕ್ಕೆ ಯಾರು ನೇಮಕ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮತ್ತೊಂದೆಡೆ ಕಾಲ್ತುಳಿತ ದುರಂತಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವು ಕಾರಣ ಎಂಬ ಆರೋಪ ಕೇಳಿಬಂದಿತ್ತು. ಆರ್ಸಿಬಿ ವಿಜಯಯಾತ್ರೆಗೆ ಒಮ್ಮೆಗೆ ಇಷ್ಟೊಂದು ಜನ ಆಗಮಿಸುತ್ತಾರೆಂಬ ಯಾವ ಸುಳಿವನ್ನು ಗುಪ್ತಚರ ಇಲಾಖೆಯು ಸರ್ಕಾರ ಅಥವಾ ಪೊಲೀಸ್ ಇಲಾಖೆಗೆ ನೀಡಿಲ್ಲ. ಆದ್ದರಿಂದ ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧ ಕ್ರಮ ಕೈಗೊಂಡ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.