ಚಿತ್ರದುರ್ಗ: ಇತ್ತೀಚೆಗಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಈ ಅಪಘಾತಗಳದ್ದೇ ಸುದ್ದಿ. ಅತೀ ವೇಗದ ವಾಹನ ಚಾಲನೆಯಿಂದ ಅದೆಷ್ಟೋ ರಣ ಭೀಕರ ಅಪಘಾತಗಳು ಸಂಭವಿಸಲು ದಾರಿ ಮಾಡಿಕೊಡುತ್ತವೆ. ಇದೀಗ ಅಂತಹದ್ದೇ ಅಪಘಾತವೊಂದು ಚಿತ್ರದುರ್ಗದ ಬಸ್ ನಿಲ್ದಾಣದ ಸಮೀಪ ನಡೆಸಿದೆ. ಹಿಂಭಾಗದಿಂದ ಬಂದ ಬಸ್ಸೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಮುಂಭಾಗದ ಬಸ್ಗೆ ಹೋಗಿ ಗುದ್ದಿದೆ. ಈ ವೇಳೆ ಈ ಎರಡು ಬಸ್ಗಳ ನಡುವೆ ಸಿಲುಕಿಕೊಂಡ ಆಟೋ ಅಪ್ಪಚ್ಚಿಯಾಗಿದ್ದು, ಈ ಭೀಕರ ಅಪಘಾತದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದ ವಿಡಿಯೋ ವೈರಲ್ ಆಗುತ್ತಿದೆ.
@nabilajamal ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಆಟೋಗೆ ಹಿಂಭಾಗದಿಂದ ಬಂದ ಖಾಸಗಿ ಬಸ್ಸು ಡಿಕ್ಕಿ ಹೊಡೆಯುವುದನ್ನು ನೋಡಬಹುದು. ಖಾಸಗಿ ಬಸ್ ಗುದ್ದಿದ ರಭಸಕ್ಕೆ ಆಟೋ ಮುಂಭಾಗದ ಸಾರಿಗೆ ಬಸ್ ಗೆ ಅಪ್ಪಳಿಸಿದ್ದು ಎರಡು ಬಸ್ಗಳ ನಡುವೆ ಸಿಲುಕಿ ಅಪ್ಪಚ್ಚಿಯಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಅಪಘಾತದ ಪರಿಣಾಮವಾಗಿ ಐವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಈ ವಿಡಿಯೋ ಈವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನಿಜವಾಗಿ ಯಮರಾಜ ರಜೆಯಲ್ಲಿ ಇರಬೇಕು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆಘಾತಕಾರಿ ವಿಡಿಯೋ, ಪವಾಡ ಸದೃಶವಾಗಿ ಪಾರಾರಾಗಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾ ಭಯಾನಕವಾಗಿದೆ ಎಂದಿದ್ದಾರೆ.