ಚಿತ್ರದುರ್ಗ : ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ(60), ವಿದ್ಯಾರಣ್ಯಪುರದ ರುದ್ರಸ್ವಾಮಿ(52), ಬೆಂಗಳೂರು ಉತ್ತರದ ಈರಣ್ಣ ಬಡಾವಣೆಯ ಮಲ್ಲಿಕಾರ್ಜುನ(50), ಚಂದ್ರಹಾಸ್, ಶ್ರೀನಿವಾಸ್ ಮೃತರು. ಇನ್ನು ನಿರ್ದೇಚಿದಂಬರಾಚಾರ್(52) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಕಾರಿನಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಪ್ರಸಾದ ಪತ್ತೆಯಾಗಿದೆ. ಹೀಗಾಗಿ ಅವರು ಕಾರಿನಲ್ಲಿ ಸವದತ್ತಿಯ ರೇಣುಕಾ ಯಲ್ಲಮ್ಮ ದೇಗುಲಕ್ಕೆ ಹೋಗಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಕಾರಿನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಮೂಲದ ಇನೊವಾ ಕಾರು, ತಮಿಳುನಾಡು ಪಾಸಿಂಗ್ ಇರುವ ಲಾರಿ ಹಿಂಬದಿಗೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಪೃತಪಟ್ಟಿದ್ದಾರೆ. ಇನ್ನು ಗುದ್ದಿದ ರಭಸಕ್ಕೆ ಇನ್ನೊವಾ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಪ್ರಕರಣ ಸಂಬಂಧ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತಮಟಕಲ್ಲು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ಇನೊವಾ ಡಿಕ್ಕಿಯಾಗಿದೆ. ರಸ್ತೆಯ ಎಡಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಇನೊವಾ ಬಂದು ಗುದ್ದಿದೆ. ಅಪಘಾತ ಸ್ಥಳ ನೋಡಿದರೆ ಕಾರು ಬ್ರೇಕ್ ಬಳಸಿದಂತೆ ಕಾಣುತ್ತಿಲ್ಲ ಎಂದು ಮಾಹಿತಿ ನೀಡಿದರು.
ಕಾರಲ್ಲಿದ್ದ ಐವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರವಾಗಿದೆ. ಇನೊವಾ ಕಾರ್ ಚಾಲಕನ ನಿರ್ಲಕ್ಷ, ಓವರ್ ಸ್ಪೀಡ್ ನಿಂದ ಈ ಅಪಘಾತ ಸಂಭವಿಸಿದೆ. ಇನೊವಾ ಕಾರಲ್ಲಿದ್ದವರು ಬೆಂಗಳೂರು ಮೂಲದವರು. ಬೆಳಗಾವಿಯ ಸವದತ್ತಿಯಿಂದ ವಾಪಸ್ಸಾಗುತ್ತಿದ್ದರೆಂಬ ಮಾಹಿತಿ ಸಿಕ್ಕಿದೆ ಎಂದು ಹೇಳಿದರು. ಸವದತ್ತಿಯ ಯಲ್ಲಮ್ಮ ದೇಗುಲದ ಪ್ರಸಾದ ಇನೊವಾ ಕಾರಲ್ಲಿದೆ. ಬೆಂಗಳೂರಿನ ಚಿದಂಬರಾಚಾರ್, ಶಾಂತಮೂರ್ತಿ, ಮಲ್ಲಿಕಾರ್ಜುನ, ರುದ್ರಸ್ವಾಮಿ ಮೃತರು. ಓರ್ವ ಮೃತ ವ್ಯಕ್ತಿ ಮತ್ತು ಗಾಯಾಳುವಿನ ಹೆಸರು ಪತ್ತೆ ಆಗಬೇಕಿದೆ. ಇನೊವಾ ಕಾರ್ ಓವರ್ ಸ್ಪೀಡ್ ನಿಂದ ಅಪಘಾತ ನಡೆದಿದೆ ಎಂದು ಸ್ಪಷ್ಟಪಡಿಸಿದರು.