ಹೊಸಕೋಟೆ : ತಾಲೂಕಿನ ಕಸಬಾ ಹೋಬಳಿಯ ಕಣ್ಣೂರಹಳ್ಳಿ ಗ್ರಾಮದಲ್ಲಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿಯಾಗಿ ಮನೆಗೆ ಕಲ್ಲುತೂರಾಟ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆ ವಿಚಾರವಾಗಿ ಎರಡು ಗುಂಪುಗಳಿAದ ಪ್ರತ್ಯೇಕವಾಗಿ ದೂರು ನೀಡಿದ್ದು ಒಟ್ಟು 28 ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ.
ಕಣ್ಣೂರಹಳ್ಳಿ ಗ್ರಾಮದ ದಲಿತ ಕೇರಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿ ಮಂಗಳವಾರ ಸಂಜೆ ಗಣಪತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಗ್ರಾಮದಲ್ಲಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯು ರಾಮಮೂರ್ತಿ ಎಂಬುವವರ ಮನೆಯ ಬಳಿಗೆ ಬಂದಾಗ ಮನೆಯ ಮುಂದೆ ಯುವಕರು ಪಟಾಕಿ ಸಿಡಿಸಿದ ಸಂದರ್ಭದಲ್ಲಿ ಪ್ರಶ್ನೆ ಮಾಡಲು ಬಂದ ಸುಬ್ರಹ್ಮಣ್ಯ, ರಾಧಾ, ವೆಂಕಟ ಲಕ್ಷ್ಮಮ್ಮ ಇವರುಗಳ ಮೇಲೆ ಗಣಪತಿ ಮೆರವಣಿಗೆ ಮಾಡುತ್ತಿದ್ದ ಯುವಕರಾದ ಮನೋಜ್, ಹರೀಶ್, ಎಂ ರವಿಕುಮಾರ್, ಪ್ರದೀಪ್, ಅಂಬರೀಶ್, ಶಾಂತಕುಮಾರ್, ಭಗವಾನ್, ಗುರುಸ್ವಾಮಿ, ಪಿ.ಮುನಿರಾಜ್, ಅನಿಲ್ ಕುಮಾರ್, ಸುನಿಲ್ ಕುಮಾರ್, ಮಾರ್ಕೊಂಡೊಯ್ಯ, ಹರೀಶ್, ಎಂಬುವವರು ಗುಂಪು ಕಟ್ಟಿಕೊಂಡು ಮನೆ ಮೇಲೆ ಕಲ್ಲುತೂರಾಟ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕು ಕಬ್ಬಿಣದ ಪೈಪ್ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಎಂದು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಜಾತಿನಿಂದನೆ, ಹಲ್ಲೆ ಆರೋಪ ಪ್ರತಿ ದೂರು : ದಲಿತ ಕೇರಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆಗೆಂದು ಮೆರವಣಿಗೆ ಮಾಡುವ ಸಂದರ್ಭದಲ್ಲಿ ರಾಮಮೂರ್ತಿ ಅವರ ಮನೆಯ ಬಳಿಗೆ ಮೆರವಣಿಗೆ ಬಂದಾಗ ರಾಮಮೂರ್ತಿ ಎಂಬಾತ ದಲಿತರ ಕಾಲೋನಿಯ ಗಣಪತಿ ನಮ್ಮ ಬೀದಿಗೆ ಏನಕ್ಕೆ ಮೆರವಣಿಗೆಗೆ ತರುತ್ತೀರಾ? ನಮ್ಮ ಬೀದಿಗೆ ನೀವು ಬರಬಾರದು ಎಂದು ಗುಂಪು ಕಟ್ಟಿಕೊಂಡು ಬಂದು ಪ್ರದೀಪ್, ಅಂಬರೀಶ್ ಎಂಬುವವರ ಮೇಲೆ ದೊಣ್ಣೆಯಿಂದ ಕೆಂಪರಾಜು, ಆನಂದ್, ಮುರಳಿ, ಮುನಿರಾಜು, ಮಧುಸೂದನ್, ಮಂಜುನಾಥ್, ಅನಿಲ್, ಹರ್ಷ, ಸುನಿಲ್, ನರೇಂದ್ರ, ಕೆಂಪರಾಜು, ಜುಂಜಪ್ಪ, ಉಮೇಶ್, ಸುಧಾ,ಉಷಾ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚಿನ ಮಂದಿ ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣವನ್ನು ದಾಖಲು ಮಾಡಿದ್ದಾರೆ.