ಬೆಂಗಳೂರು: ಉದ್ಯೋಗ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ರಾಜ್ಯದಲ್ಲಿ ಬಲಜಿಗ/ಬಣಜಿಗ ಸಮುದಾಯವನ್ನು ಹಿಂದುಳಿದ ವರ್ಗಗಳ ಸಮುದಾಯಗಳ ಪ್ರವರ್ಗ ಬಿ ಮತ್ತು ಡಿ ಎರಡರಲ್ಲೂ ವರ್ಗೀಕರಿಸಿರುವುದು ಅಸಂವಿಧಾನಿಕ ಎಂದು ಘೋಷಿಸಿರುವ ಹೈಕೋರ್ಟ್, ಈ ಸಮುದಾಯ ಪ್ರವರ್ಗ-ಬಿ ಅಡಿಯಲ್ಲಿ ಉದ್ಯೋಗಕ್ಕಾಗಿ ಮೀಸಲು ಪಡೆಯಲು ಅರ್ಹವಾಗಿದೆ ಎಂದು ತಿಳಿಸಿದೆ.

ಅಲ್ಲದೆ, ಉದ್ಯೋಗದ ಉದ್ದೇಶಕ್ಕಾಗಿ ಬಲಜಿಗ/ಬಣಜಿಗ ಸಮುದಾಯವನ್ನು ಪ್ರವರ್ಗ-ಡಿ ಅಡಿ, ಶಿಕ್ಷಣದ ಉದ್ದೇಶಕ್ಕಾಗಿ ಪ್ರವರ್ಗ-ಬಿ ಅಡಿ ವರ್ಗೀಕರಿಸಿರುವುದು ಸಂವಿಧಾನದ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಆದ್ದರಿಂದ ಬಲಜಿಗ/ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿಯಲ್ಲಿ ಗ್ರೂಪ್-ಡಿ ಬದಲಿಗೆ ಗ್ರೂಪ್-ಬಿ ಅಡಿಯಲ್ಲಿ ಮರು ವರ್ಗೀಕರಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.
ಒಂದು ನಿರ್ದಿಷ್ಟ ಸಮುದಾಯವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಒಂದು ಪ್ರವರ್ಗದಡಿ ಹಾಗೂ ಉದ್ಯೋಗ ಉದ್ದೇಶಕ್ಕಾಗಿ ಮತ್ತೊಂದು ಪ್ರವರ್ಗದಡಿ ವರ್ಗೀಕರಿಸಲು ಸಾಧ್ಯವಿಲ್ಲ. ಒಂದೇ ಪ್ರವರ್ಗದಡಿ ವರ್ಗೀಕರಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ಬಲಜಿಗ/ಬಣಜಿಗ ಸಮುದಾಯ ಶಿಕ್ಷಣ ಉದ್ದೇಶಕ್ಕಾಗಿ ಪ್ರವರ್ಗ-ಬಿ ಅಡಿ ವರ್ಗೀಕರಿಸಿದ ನಂತರ ಉದ್ಯೋಗ ಉದ್ದೇಶಕ್ಕೂ ಸಹ ಪ್ರವರ್ಗ-ಬಿ ವರ್ಗದಡಿಯೇ ವರ್ಗೀಕರಿಸುವ ಅಗತ್ಯವಿದೆ ಹೊರತು, ಪ್ರವರ್ಗ-ಡಿ ಅಡಿಯಲ್ಲಿ ಅಲ್ಲ. ಆದ್ದರಿಂದ ಈ ಕುರಿತು ಮರು ವರ್ಗೀಕರಣ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಶಿಕ್ಷಕಿ (41) ವಿ.ಸುಮಿತ್ರಾ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಜೊತೆಗೆ, ಒಂದು ನಿರ್ದಿಷ್ಟ ವರ್ಗ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಶೈಕ್ಷಣಿಕ ಉದ್ದೇಶಕ್ಕಾಗಿ ಒಂದು ಪ್ರವರ್ಗಕ್ಕೆ ಸೇರಿಸಿ, ಅದೇ ಸಮುದಾಯವು ಆರ್ಥಿಕವಾಗಿ ಮುಂದುವರಿದಿದೆ ಎಂದು ಉದ್ಯೋಗದ ಉದ್ದೇಶಕ್ಕಾಗಿ ಮತ್ತೊಂದು ಪ್ರವರ್ಗದಡಿ ವರ್ಗೀಕರಿಸಿ ಪ್ರಾತಿನಿಧ್ಯ ಕೊಡಲಾಗದು ಎಂದು ಕೋರ್ಟ್ ತಿಳಿಸಿದೆ.
ಪ್ರಕರಣ ಹಿನ್ನೆಲೆ: ಅರ್ಜಿದಾರರಾದ ಸುಮಿತ್ರಾ ಅವರು ಬಲಜಿಗ/ಬಣಜಿಗ ಸಮುದಾಯಕ್ಕೆ ಸೇರಿದ್ದು, ಸಂವಿಧಾನದ ಪರಿಚ್ಛೇದ 15(4) ನಿಯಮಗಳ ಅನುಸಾರ ವರ್ಗೀಕರಿಸಲಾದ ಪ್ರವರ್ಗ-ಬಿ ಅಡಿಯಲ್ಲಿಯೇ ಶಿಕ್ಷಣ ಪೂರ್ಣಗೊಳಿಸಿದ್ದರು. 1991ರಲ್ಲಿ ಶಿಕ್ಷಕಿ ಹುದ್ದೆಗೆ ಅರ್ಜಿ ಸಲ್ಲಿಸಿ, ಹಿಂದುಳಿದ ವರ್ಗಗಳ ಅಡಿಯಲ್ಲಿ (ಒಬಿಸಿ) ಮೀಸಲು ಕೋರಿದ್ದರು. ನಂತರ 1993ರಲ್ಲಿ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ಸುಮಿತ್ರಾ ಪ್ರವರ್ಗ-ಬಿ ಸೇರಿದ್ದಾರೆ ಎಂದು ತಹಶೀಲ್ದಾರ್ ಸಹ ಜಾತಿ ಪ್ರಮಾಣ ಪತ್ರ ನೀಡಿದ್ದರು.
ಆದರೆ, ಸೇವೆಯಲ್ಲಿ ಮುಂದುವರಿಯುತ್ತಿದ್ದಾಗ 1996ರಲ್ಲಿ ಮೈಸೂರು ಜಿಲ್ಲೆಯ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಸುಮಿತ್ರಾ ಅವರ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದ್ದರು. ಈ ಪ್ರಮಾಣ ಪತ್ರ ಸಮರ್ಪಕವಾಗಿಲ್ಲ, ಅದು ಉದ್ಯೋಗ ಮೀಸಲಾತಿಗೆ ಅನ್ವಯಿಸುವುದಿಲ್ಲ. ಉದ್ಯೋಗದ ಉದ್ದೇಶದಿಂದ ಅವರು ಪ್ರವರ್ಗ-ಡಿಗೆ ಸೇರುತ್ತಾರೆ ಹೊರತು ಪ್ರವರ್ಗ-ಬಿಗೆ ಅಲ್ಲ ಎಂದು ತಿಳಿಸಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಿದ್ದರು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2013ರಲ್ಲಿ ಕೆಎಟಿ ತಿರಸ್ಕರಿಸಿದ ಕಾರಣ ಸುಮಿತ್ರಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ ಜಾತಿ ಬಗ್ಗೆ ಸುಳ್ಳು ಹೇಳಿಕೆ ನೀಡಿಲ್ಲ. ತಾನು ಬಲಜಿಗ ಮತ್ತು ಬಣಜಿಗ ಸಮುದಾಯಕ್ಕೆ ಸೇರಿದ್ದಾಗಿ ಪ್ರತಿಸಲವೂ ಹೇಳಿದ್ದಾರೆ. 1986ರ ಅ.13ರಂದು ರಾಜ್ಯ ಸರ್ಕಾರವು ಹಿಂದುಗಳಿದ ವರ್ಗಗಳಾಗಿ ವಿಂಗಡಿ ಆದೇಶ ಹೊರಡಿಸಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ಬಲಜಿಗ/ಬಣಜಿಗ ಸಮುದಾಯವನ್ನು ಭಾರತದ ಸಂವಿಧಾನದ 15(4)ನೇ ವಿಧಿಯ ಅಡಿಯಲ್ಲಿ ಮಾಡಲಾದ ಮೀಸಲಾತಿಯ ಮಟ್ಟಿಗೆ ಅನುಬಂಧ-I, ಪ್ರವರ್ಗ- ಬಿ ನಲ್ಲಿ ಕ್ರಮ ಸಂಖ್ಯೆ 133(b) ನಲ್ಲಿ ತೋರಿಸಿದೆ. ಆದರೆ, ಉದ್ಯೋಗ ಉದ್ದೇಶಕ್ಕಾಗಿ ಅದೇ ಸಮುದಾಯವನ್ನು ಉದ್ಯೋಗದ ಅನುಬಂಧ-II, ಪ್ರವರ್ಗ-ಡಿ, ಕ್ರಮ ಸಂಖ್ಯೆ 13(b) ನಲ್ಲಿ ತೋರಿಸಿದೆ ಎಂದು ವಾದಿಸಿದ್ದರು.
ಬಲಜಿಗ/ಬಣಜಿಗ ಸಮುದಾಯ ಶೈಕ್ಷಣಕವಾಗಿ ಹಿಂದುಳಿದೆ. ಅದರಿಂದ ಆ ಸಮುದಾಯವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಪ್ರವರ್ಗ-ಬಿ ಅಡಿಯಲ್ಲಿ ವರ್ಗೀಕರಿಸಿದೆ. ಆದರೆ, ಅದೇ ಸಮುದಾಯ ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದೆ. ಇದರಿಂದ ಉದ್ಯೋಗ ಉದ್ದೇಶಗಳಿಗಾಗಿ ಸಂವಿಧಾನದ ಪರಿಚ್ಛೇದ 16(4) ರ ಅಡಿಯಲ್ಲಿ ಪ್ರವರ್ಗ-ಡಿ ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದು ಪೀಠಕ್ಕೆ ಸರ್ಕಾರದ ಪರ ವಕೀಲರು ತಿಳಿಸಿದ್ದರು. ವಾದ ಆಲಿಸಿದ ಪೀಠ, ಈ ಆದೇಶ ನೀಡಿದೆ.