ಸಿ ಎಂ – ಡಿಸಿಎಂ ಗೆ ಇ ಮೇಲ್ ನಲ್ಲಿ ಕೊಲೆ ಬೆದರಿಕೆ : ತನಿಖೆ ಆರಂಭ

ಸಿ ಎಂ - ಡಿಸಿಎಂ ಗೆ ಇ ಮೇಲ್ ನಲ್ಲಿ ಕೊಲೆ ಬೆದರಿಕೆ : ತನಿಖೆ ಆರಂಭ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಕೊಲೆ ಮಾಡುವುದಾಗಿ ಕಿಡಿಗೇಡಿಯೊಬ್ಬ ಇ-ಮೇಲ್ ಮೂಲಕ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಈ ಸಂದೇಶ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಿಂಧಾರ್‌ ರಜಪೂತ್ ಹೆಸರಿನ ಇ-ಮೇಲ್‌ನಿಂದ ಈ ಬೆದರಿಕೆ ಸಂದೇಶ ಬಂದಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಇಬ್ಬರನ್ನೂ ಕೊಲೆ ಮಾಡಿ ಫ್ರಿಜ್ ಮತ್ತು ಟ್ರ್ಯಾಲಿ ಬ್ಯಾಗ್‌ಗೆ ತುಂಬುವುದಾಗಿ ಇ-ಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಇ-ಮೇಲ್ ಅನ್ನು ಡಿಸಿಎಂ ಡಿ.ಕೆ.ಶಿವಕುಮಾ‌ರ್, ಗೃಹ ಸಚಿವರು, ನಗರ ಪೊಲೀಸ್ ಕಮಿಷನರ್‌ಗೂ ರವಾನೆ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ರಾಮಪುರದ ಪ್ರಭಾಕರ್‌ಗೆ ₹1 ಕೋಟಿ ಸಾಲ ಕೊಟ್ಟಿದ್ದೇನೆ. ಆದರೆ, ಆತ ಈವರೆಗೂ ಸಾಲ ವಾಪಸ್ ಕೊಟ್ಟಿಲ್ಲ. ಆದಷ್ಟು ಬೇಗ ಪ್ರಭಾಕರ್‌ಗೆ ಸಾಲ ವಾಪಸ್ ಕೊಡಲು ಹೇಳಿ. ಪ್ರಭಾಕರ್ ತನ್ನ ನಾದಿನಿ ಹಾಗೂ ಪೋಷಕರ ಮನೆಯಲ್ಲಿ ಹಣ ಅಡಗಿಸಿಟ್ಟಿದ್ದಾನೆ. ಪ್ರಭಾಕರ್‌ಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ಒಬ್ಬ ಮಗನನ್ನು ಮದುವೆ ಮಾಡಿದ್ದಾನೆ. ಸಾಲದ ಹಣವನ್ನು ವಾಪಸ್ ನೀಡಲು ಆತನಿಗೆ ಆದಾಯ ಮೂಲ ಇಲ್ಲ. ಹೀಗಾಗಿ, ಪ್ರಭಾಕರ್‌ನನ್ನು ಕೊಲೆ ಮಾಡುತ್ತೇನೆ’ ಎಂದು ಅದೇ ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾನೆ.

Leave a Reply

Your email address will not be published. Required fields are marked *