ಬೆಂಗಳೂರು: ಕಾಫಿ ಪುಡಿ ಮತ್ತು ಟೀ ಪುಡಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಕಾಫಿ-ಟೀ ದರ ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ. ಪ್ರಸ್ತುತ ಆಯಾ ಹೋಟೆಲ್ಗಳಿಗೆ ಅನುಗುಣವಾಗಿ ಒಂದು ಕಪ್ ಕಾಫಿ/ಟೀಗೆ 15ರಿಂದ 35 ರೂ. ದರ ಇದೆ. ಇದೀಗ ಪ್ರತಿ ಕಪ್ಗೆ 2 ರೂ. ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ.
ಪ್ರಸಕ್ತ ಸಾಲಿನ ಮಾರ್ಚ್ ನಂತರದಲ್ಲಿ ಎರಡು ಬಾರಿ ಕಾಫಿ ಪುಡಿ ದರ (ಕ್ರಮವಾಗಿ ಕೆ.ಜಿ. 80 ಹಾಗೂ 70 ರೂ.) ಏರಿಕೆಯಾಗಿದ್ದು, ಈಗ ಕೆ.ಜಿ. ಕಾಫಿ ಪುಡಿಗೆ 750 ರೂ. ಇದೆ. ಶೀಘ್ರದಲ್ಲೇ 100-120 ರೂ.ವರೆಗೆ ದರ ಹೆಚ್ಚಳ ಮಾಡಲು ಕಾಫಿ ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಜತೆಗೆ ಟೀ ಪುಡಿ ದರವೂ 40-45 ರೂ. ಹೆಚ್ಚಾಗಿದ್ದು, ಕೆ.ಜಿ.ಗೆ 425 ರೂ. ಇದೆ. ಹಾಲಿನ ದರವೂ ಹೆಚ್ಚಳವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಕಾಫಿ-ಟೀ ದರ ಹೆಚ್ಚಳ ಅನಿವಾರ್ಯವಾಗಿದೆ. ಆದರೆ ಇದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಆಗಬಹುದು ಎಂಬ ಚಿಂತೆಯೂ ಹೋಟೆಲ್ ಮಾಲೀಕರನ್ನು ಕಾಡುತ್ತಿದೆ. ದೀಪಾವಳಿ ನಂತರ ದರ ಹೆಚ್ಚಿಸುವ ಬಗ್ಗೆ ನಿರ್ಧರಿಸ ಲಾಗುವುದು. ಎನ್ನುತ್ತಾರೆ ಹೋಟೆಲ್ ಮಾಲೀಕರು.