ಬೆಂಗಳೂರು; ಕೇಂದ್ರದ ನರೇಂದ್ರ ಮೋದಿ ಸರ್ಕಾರವು ದೇಶದ ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸಲು ನಿರ್ಧರಿಸಿರುವ ಕ್ರಮವನ್ನು ನಮ್ಮ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ(ರಿ.)ವು ಹೃದಯಪೂರ್ವಕವಾಗಿ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಈ ಜಾತಿ ಜನಗಣತಿ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೂ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಒಕ್ಕೂಟವು ಆಗ್ರಹಪಡಿಸುತ್ತದೆ.

ಜಾತಿ ಗಣತಿ ಜೊತೆಯಲ್ಲಿ ಮೀಸಲಾತಿ ಮಿತಿ ಏರಿಕೆಯ ನಿರ್ಧಾರವನ್ನು ಸಂಪೂರ್ಣ ಬೆಂಬಲಿಸಿ ಅದನ್ನು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರೂಪಿಸಿ ದೇಶಾದ್ಯಂತ ಕ್ರಾಂತಿಕಾರಿ ರೀತಿಯಲ್ಲಿ ಪ್ರಚಾರ ಮಾಡುತ್ತಾ ಬಂದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇವೆ.
ಜಾತಿ ಆಧಾರಿತ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗಳನ್ನು ನಡೆಸುವ ಮೂಲಕ ವೈಜ್ಞಾನಿಕವಾಗಿ ಮೀಸಲಾತಿ ನೀತಿಯನ್ನು ರೂಪಿಸುವುದೇ ಸಂವಿಧಾನದ ಮೂಲ ಉದ್ದೇಶವಾಗಿದ್ದು, ಪ್ರಸ್ತುತ ನಮ್ಮ ದೇಶದ್ಯಾಂತ ಶೇಕಡಾ ೫೦%ಕ್ಕಿಂತ ಹೆಚ್ಚು ಮೀಸಲಾತಿ ನೀಡಬಾರದೆಂಬ ನಿಯಮವಿದ್ದು(ಇಂದಿರಾ ಸಹಾನಿ ಪ್ರಕರಣ), ಪ್ರತಿ ಬಾರಿ ಮೀಸಲಾತಿಗೆ ಸಂಬAಧಿಸಿದ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಂಕೋರ್ಟ್ ಮೀಸಲಾತಿ ಪ್ರಮಾಣ ಹೆಚ್ಚಿಸಲು ನಿಮ್ಮ ಬಳಿಯಲ್ಲಿ ಯಾವ ಮಾನದಂಡ ಹಾಗೂ ವರದಿ ಇದೆ ಎಂದು ಹಾಗೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಇಂತಹ ಸಮೀಕ್ಷೆಯನ್ನು ನಡೆಸುವ ಅಗತ್ಯತೆಯನ್ನು ಒತ್ತಿ ಒತ್ತಿ ಹೇಳುತ್ತಾ ಬಂದಿರುತ್ತದೆ. ಆದ್ದರಿಂದ ಇಂತಹ ಸಮೀಕ್ಷೆಯ ವರದಿಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿಯ ಮೀತಿಯನ್ನು ಪರಿಷ್ಕರಿಸಿ ಮೀಸಲಾತಿ ವರ್ಗಿಕರಿಸಿ ಪ್ರಮಾಣವನ್ನು ಶೇಕಡಾ ೫೦%ಕ್ಕಿಂತ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರವು ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನಮ್ಮ ಒಕ್ಕೂಟವು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸುತ್ತದೆ.
ರಾಜ್ಯ ಸರ್ಕಾರವು ಹೆಚ್.ಕಾಂತರಾಜು ಆಯೋಗದ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ ಹಾಗೂ ಡಾ|| ಜಯಪ್ರಕಾಶ್ ಹೆಗಡೆ ಆಯೋಗದ ಮೀಸಲಾತಿ ವರ್ಗಿಕರಣ ಶಿಫಾರಸ್ಸನ್ನು ಈಗಾಗಲೇ ಸಂಪುಟ ಸಭೆಯಲ್ಲಿ ಮಂಡಿಸಿದ್ದು, ಈ ವರದಿಯಲ್ಲಿ ಯಾವುದಾದರು ನ್ಯೂನತೆಗಳು ಇದ್ದಲ್ಲಿ ಶೀಘ್ರವೇ ಸರಿಪಡಿಸಿ, ರಾಜ್ಯದ ಯಾವೊಂದು ಸಮುದಾಯಗಳಿಗೆ ಅನ್ಯಾಯವಾಗದಂತೆ, ಸರ್ವ ಸಮುದಾಯಗಳಿಗೆ ಸೂಕ್ತ ನ್ಯಾಯೋಚಿತವಾದ ಸಾಮಜಿಕ ನ್ಯಾಯದಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಒಕ್ಕೂಟವು ಒತ್ತಾಯಿಸುತ್ತದೆ.
ಜಾತಿ ಗಣತಿ ನಡೆಸುವುದರಿಂದ ಜಾತಿ ಸಂಘರ್ಷಗಳು ಹೆಚ್ಚಾಗಿ ಸಮಾಜ ಒಡೆದುಹೋಗುತ್ತದೆ, ಜಾತಿ ಗಣತಿ ಎನ್ನುವುದು ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಎಂದೆಲ್ಲ ವರ್ಷಗಳ ಕಾಲ ಟೀಕಾ ಪ್ರಹಾರ ಮಾಡುತ್ತಾ ಬಂದ ಭಾರತೀಯ ಜನತಾ ಪಕ್ಷ ಮತ್ತು ಅದರ ನೇತೃತ್ವದ ಸರ್ಕಾರಗಳು ಕೊನೆಗೂ ಜಾತಿ ಗಣತಿಯ ಸಾಮಾಜಿಕ ಮಹತ್ವವನ್ನು ಅರ್ಥಮಾಡಿ ಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ.
ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಎನ್ನುವುದು ವಾಸ್ತವ. ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ಜಾತಿ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳುವ ಮೂಲಕವೇ ಅದರ ನಾಶಕ್ಕೆ ಪ್ರಯತ್ನಿಸಬೇಕಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನತೆಯನ್ನು ಸಮಾಜದಲ್ಲಿ ಹೋಗಲಾಡಿಸುವ ಮೂಲಕವೇ ಜಾತಿನಾಶ ಸಾಧ್ಯ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಪ್ರತಿಪಾಧಿಸುತ್ತದೆ. ಮಾನ್ಯರಾದ ತಾವುಗಳು ಈ ವಿಷಯವನ್ನು ತಮ್ಮ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಚಾರ ಮಾಡಲು ಈ ಮೂಲಕ ಕೋರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕರು ಕೆ.ಎಂ. ರಾಮಚಂದ್ರಪ್ಪ, ಪ್ರೋ|| ರವಿವರ್ಮ ಕುಮಾರ್
ಖ್ಯಾತ ನ್ಯಾಯವಾದಿಗಳು , ಎಣ್ಣೆಗೆರೆ ಆರ್. ವೆಂಕಟರಾಮಯ್ಯ.. ಸಂಚಾಲಕರು , ಅನಂತನಾಯ್ಕ ಎನ್
ಸಂಚಾಲಕರು , ಅಬ್ದುಲ್ ಮನನ್ ಸೇಠ್ ಸಂಚಾಲಕರು,
ಡಾ|| ಬಿ.ಟಿ. ಲಲಿತಾ ನಾಯಕ್ ಸಂಚಾಲನಾ ಸಮಿತಿ ಸದಸ್ಯರು, ಮನೋಹರ್ ಚಂದ್ರಪ್ರಸಾದ್
ಅಧ್ಯಕ್ಷರು ದಲಿತ ಕ್ರೀಶ್ಚಿಯನ್ ಉಪಸ್ಥಿತರಿದ್ದರು.