ಬೆಂಗಳೂರು: ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಪ್ರಿಯಾಂಕ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ಮುಖಾಂತರ ಬೇಕೆಂದೇ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಅಪಪ್ರಚಾರ ಮಾಡಿರುವುದನ್ನು ಖಂಡಿಸುವುದಾಗಿ ಎಸ್.ಸಿ ಮೋರ್ಚಾ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಅವರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಬೇಕೆಂದೇ ಕೆಲವು ಅಪಪ್ರಚಾರ ಮಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ಮತಾಂತರ ಆಗಿದ್ದರು ಎಂದು ನಾನು ಯಾವತ್ತೂ ಹೇಳಿಲ್ಲ; ಅವರು ನಿಜವಾಗಲು ಹಿಂದೂಗಳೇ; ಅಲ್ಲದೆ ನನ್ನ ಸಂಬಂಧಿಗಳು ಹಾಗೂ ನಮ್ಮ ತಾಲ್ಲೂಕಿನವರು ಕೂಡ ಹೌದು. ಅವರು ಹಿಂದೂ ಆಗಿಯೇ ಇರುತ್ತಾರೆ ಮತ್ತು ಸದಾಕಾಲ ಹಿಂದುತ್ವದ ಬಗ್ಗೆ ಮತ್ತು ದೇಶದ ಬಗ್ಗೆ ಕಾಳಜಿ ಇರುವವರು ಎಂದು ಅವರು ತಿಳಿಸಿದರು.
ಬಿಜೆಪಿಯು, ದಲಿತರಾದ ಛಲವಾದಿ ನಾರಾಯಣಸ್ವಾಮಿಯವರಿಗೆ ವಿಧಾನಪರಿಷತ್ತಿನ ಸದಸ್ಯತ್ವವನ್ನು ನೀಡಿ ವಿರೋಧ ಪಕ್ಷದ ನಾಯಕರ ಸ್ಥಾನವನ್ನು ನೀಡಿದೆ. ಹಾಗಾಗಿ ಕಾಂಗ್ರೆÉಸ್ಸಿನವರು ಛಲವಾದಿ ನಾರಾಯಣಸ್ವಾಮಿ ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ಸಹಿಸುವುದಕ್ಕೆ ಆಗದೆ ಅವರ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರು, ದಲಿತರಿಗೆ ‘ಕಾಂಗ್ರೆಸ್ ಉರಿಯುವ ಮನೆ, ಆ ಮನೆಯಲ್ಲಿ ಬದುಕಬೇಡಿ’ ಎಂದು ಹೇಳಿದ್ದರು ಎಂದು ನೆನಪಿಸಿದರು. ಹಾಗಾಗಿ ನಮ್ಮ ದಲಿತ ಯುವ ಸಮಾಜವಿಡೀ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಆದರೆ, ಕಾಂಗ್ರೆಸ್ಸಿನವರು ನಾಟಕಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆಯವರು ಬಾಬಾಸಾಹೇಬರು ನೀಡಿರುವ ಮೀಸಲಾತಿಯ ಪಲಾನುಭವಿಗಳಾಗಿದ್ದಾರೆ. 9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿದ್ದವರು ಇಂದು ರಾಜ್ಯ ಸಭೆಯಲ್ಲಿದ್ದಾರೆ. ಅಳಿಯನನ್ನು ಸಂಸದರನ್ನಾಗಿ ಮಾಡುತ್ತಾರೆ ಹಾಗೂ ಮಗನನ್ನು 3 ಬಾರಿ ಶಾಸಕರನ್ನಾಗಿ ಮಾಡಿ ಇಂದು ಸಚಿವರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ರವರು ವಿಷ ಕುಡಿದು ದಲಿತರಿಗೆ ಅಮೃತದ ಪಾಲನ್ನು ನೀಡಿದ್ದಾರೆ. ಅಮೃತದ ಪಾಲನ್ನು ಕೆಲವರು ತಿನ್ನುವುದು ತಪ್ಪು. ಆದರೆ ರಾಷ್ಟ್ರಮಟ್ಟದಲ್ಲಿ ಅಮೃತದ ಪಾಲನ್ನು ಖರ್ಗೆ ರವರÀ ಕುಟುಂಬವೇ ಹೆಚ್ಚಾಗಿ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರನ್ನು ಗುರಿ ಮಾಡುವುದು, ದೌರ್ಜನ್ಯ ಮಾಡಿದ್ದು ಮತ್ತು ದಿಗ್ಬಂಧನ ಮಾಡಿದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಂದು ಕಾಂಗ್ರೆಸ್ಸಿನವರು ಹತಾಶರಾಗಿದ್ದಾರೆ. ಸರ್ಕಾರ ಸುಳ್ಳು ಗ್ಯಾರಂಟಿಗಳಿಂದ ಗೆದ್ದು ಬಂದು ನಾವು ಹೇಳಿದ್ದೇ ನಡೆಯುತ್ತದೆ ಎಂದು ದೌರ್ಜನ್ಯ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಕಾಲವು ಹೀಗೇ ಇರುವುದಿಲ್ಲ. ಜನರು ಕಾಂಗ್ರೆಸ್ಸನ್ನು ಕ್ಷಮಿಸುವುದಿಲ್ಲ. ಇಂದು ದಲಿತ ಸಮಾಜ ಬಿಜೆಪಿಯನ್ನು ಸಂಪೂರ್ಣವಾಗಿ ಅಪ್ಪಿಕೊಂಡಿದೆ ಹಾಗೂ ಯುವ ಸಮಾಜ ಬಿಜೆಪಿ ಪರವಾಗಿದೆ ಎಂದು ಅವರು ತಿಳಿಸಿದರು.