ಬೆಂಗಳೂರು: ಶುದ್ಧ ಇಂಧನ ಮೂಲಸೌಕರ್ಯ ಹೆಚ್ಚಿಸಲು ಮತ್ತು ರಾಜ್ಯಕ್ಕೆ ಇಂಧನ ಭದ್ರತೆ ಹೆಚ್ಚಿಸಲು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಪಾವಗಡ ಮಾದರಿಯಲ್ಲಿ ಸೋಲಾರ್ ಪಾರ್ಕ್ ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಇಂಧನ ಸಚಿವ ಕೆಜೆ ಜಾರ್ಜ್ ಸೋಮವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರದ ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಈ ಸೋಲಾರ್ ಪಾರ್ಕ್ ನಿರ್ಮಾಣವಾಗಲಿದೆ.
ಸೋಲಾರ್ ಪಾರ್ಕ್ ಗೆ ಅಗತ್ಯವಾದ ಸೂಕ್ತವಾದ ಭೂಮಿಯನ್ನು ಗುರುತಿಸಲು ಸ್ಥಳೀಯ ಪರಿಣತಿ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಉದ್ದೇಶ ಇದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ
ಕೆಜೆ ಜಾರ್ಜ್ ಅವರು ಸೋಮವಾರ ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಸುಮ್-ಸಿ ಯೋಜನೆಯ ಅನುಷ್ಠಾನದ ಪರಿಶೀಲನೆ ನಡೆಸಿದರು. ಅವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಕೆ.ಷಡಕ್ಷರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಇಂಧನ ಇಲಾಖೆ) ಗೌರವ್ ಗುಪ್ತಾ, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಇದ್ದರು
ಇದೇ ವೇಳೆ ತುಮಕೂರು ಜಿಲ್ಲೆಯಲ್ಲಿ ಎರಡು ಹೊಸ ವಿದ್ಯುತ್ ಉಪಕೇಂದ್ರಗಳನ್ನು ಉದ್ಘಾಟಿಸಲಾಯಿತು. ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ 12.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 2X8 ಎಂವಿಎ 66/11 ಕೆವಿ ಸಬ್ ಸ್ಟೇಷನ್ ಮತ್ತು 14.33 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಂಕೇನಹಳ್ಳಿಯ(ಐಕೆ ಕಾಲೋನಿ) 2X8 ಎಂವಿಎ, 66/11 ಕೆವಿ ಸಬ್ ಸ್ಟೇಷನ್ ಗೆ ಚಾಲನೆ ನೀಡಲಾಯಿತು