ಬೆಂಗಳೂರು : ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತದ ಅಬ್ಬರ ಪೂರ್ಣ ಪ್ರಮಾಣದಲ್ಲಿ ಅಲ್ಲದಾದರೂ ತಕ್ಕಮಟ್ಟಿಗೆ ಇಳಿಕೆ ಆಗಿದೆ. ಕರಾವಳಿ ಭಾಗದಿಂದ ತೀವ್ರ ಸ್ವರೂಪದ ಗಾಳಿ ಬೀಸುವ ಪರಿಣಾಮ ರಾಜ್ಯದಲ್ಲಿ ಮುಂದಿನ 3ರಿಂದ 5 ದಿನಗಳವರೆಗೆ ಹಗುರ ಮಳೆ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಕೇಂದ್ರ ಶುಕ್ರವಾರ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಮುನ್ಸೂಚನೆ ಇದೆ. ಕೆಲವು ಕಡೆಗಳಲ್ಲಿ ಮಾತ್ರವೇ ವ್ಯಾಪಕ ಮಳೆ ಬರಬಹುದು. ರಾಜ್ಯದ ಮೇಲೆ ಕಳೆದ ವಾರ ಸೈಕ್ಲೋನ್ ಫೆಂಗಲ್ ಅಬ್ಬರ ಇದ್ದಷ್ಟು ಈಗಿಲ್ಲ. ಚಂಡಮಾರುತ ತೀವ್ರತೆ ಕಡಿಮೆ ಆಗಿದೆ ಎಂದು ಹವಾಮಾನ ವರದಿ ತಿಳಿಸುತ್ತದೆ.
ಮುಂದಿನ ಐದು ದಿನಗಳ ಪೈಕಿ ಮೊದಲ ಮೂರು ದಿನ ಅಂದರೆ ಡಿಸೆಂಬರ್ 9ರವರೆಗೆ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ಚಿಕ್ಕಮಗಳೂರು, ದಾವಣಗೆರೆ, ಹಾಸನ ಮತ್ತು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ.
ಈ ಮಳೆ ಉದ್ದೇಶಿತ ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿವಸಗಳ ಕಾಲ ಚಳಿ ಹಾಗೂ ಮಬ್ಬು ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಜಿಲ್ಲೆಗಳ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇಲ್ಲ. ಬದಲಾಗಿ ಅತ್ಯಧಿಕ ಚಳಿ ಕಂಡು ಬರಲಿದೆ. ಡಿಸೆಂಬರ್ 9ರ ನಂತರ ಚಳಿ ಏರಿಕೆ, ಮಳೆ ಇಳಿಕೆ ಚಂಡಮಾರುತ ಅಬ್ಬರವು ಸಂಪೂರ್ಣವಾಗಿ ತಗ್ಗುವ ಪರಿಣಾಮವಾಗಿ ಡಿಸೆಂಬರ್ 9ರ ನಂತರ ಮಳೆಯ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯು ಸಾಧ್ಯತೆ ಇದೆ. ರಾಜ್ಯದ ಮೂರು ಭಾಗದ ಜಿಲ್ಲೆಗಳಲ್ಲಿ ಡಿಸೆಂಬರ್ 10ರ ನಂತರ ಬೆಳಗ್ಗೆ ಮತ್ತು ರಾತ್ರಿ ತೀವ್ರ ಚಳಿ ಹಾಗೂ ಮಂಜು ಬೀಳಲಿದೆ. ಆಗಾಗ ಮಲೆನಾಡು ಭಾಗದಲ್ಲಿ ತುಂತುರು ಮಳೆ ಬರಬಹದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೂ ಬೆಂಗಳೂರು ನಗರ ಹವಾಮಾನ ನೋಡುವುದಾದರೆ, ಮುಂದಿನ 48 ಗಂಟೆಗಳ ಕಾಲ ಹಗಲು ಸ್ಪಷ್ಟವಾದ ಆಕಾಶ, ಸಂಜೆ/ರಾತ್ರಿಯ ಕಡೆಗೆ ಭಾಗಶಃ ಮೋಡ ಕವಿದ ಆಕಾಶ ಕಂಡು ಬರಲಿದೆ. ತಾಪಮಾನ ಕಡಿಮೆ ಇದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 19 ° C ದಾಖಲಾಗುವ ಸಾಧ್ಯತೆ ಇದೆ ಐಎಂಡಿ ತಿಳಿಸಿದೆ.