ಮೈಸೂರು: ಫೆಂಗಲ್ ಚಂಡಮಾರುತದ ಪರಿಣಾಮ ಹಳೆ ಮೈಸೂರು ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕೊಯ್ಲುಗೆ ಬಂದ ಭತ್ತದ ಬೆಳೆ ನಾಶವಾಗುವ ಹಂತವನ್ನು ತಲುಪಿದ್ದು ರೈತರು ಏನು ಮಾಡಬೇಕೆಂದು ತೋಚದೆ ಚಿಂತಾಕ್ರಾಂತರಾಗಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ ಭತ್ತದ ಕೊಯ್ಲು ಆರಂಭಿಸಿ ಬಿಡಬಹುದಿತ್ತು. ಆದರೀಗ ಕೆಲವರು ಕೊಯ್ಲು ಆರಂಭಿಸಿ ಮಳೆಯಿಂದ ಸ್ಥಗಿತಗೊಳಿಸಿದ್ದರೆ ಮತ್ತೆ ಕೆಲವು ರೈತರು ಹೇಗಪ್ಪಾ ಕೊಯ್ಲು ಮಾಡುವುದೆಂಬ ಚಿಂತೆಯಲ್ಲಿದ್ದಾರೆ.
ಈಗಾಗಲೇ ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೇರಿ ಸೇರಿದಂತೆ ಹಲವು ಭಾಗಗಳಲ್ಲಿ ಅನಾಹುತ ಸೃಷ್ಟಿಸಿದ್ದು, ಭಾರೀ ಮಳೆಯಿಂದ ಸಾವು ನೋವುಗಳಾಗುತ್ತಿವೆ. ಅದರ ಪರಿಣಾಮ ರಾಜ್ಯದ ಮೇಲಾಗುತ್ತಿದ್ದು, ಮೈಸೂರು ಭಾಗದಲ್ಲಿ ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದ್ದರೆ, ಮಲೆನಾಡು ಪ್ರದೇಶಗಳಲ್ಲಿ ಕಾಫಿ ಬೆಳೆಗಾರರು ಪರದಾಡುವಂತಾಗಿದೆ.
ಕೊಡಗು ಹಾಸನ ಚಿಕ್ಕಮಗಳೂರು ಭಾಗಗಳಲ್ಲಿ ಕಾಫಿ ಮತ್ತು ಭತ್ತ ಬೆಳೆಯಲಾಗುತ್ತಿದ್ದು, ಇದೆರಡು ಬೆಳೆಯ ಕೊಯ್ಲು ಡಿಸೆಂಬರ್ ತಿಂಗಳಿನಿಂದಲೇ ಆರಂಭವಾಗುತ್ತಿದೆ. ಅದರಲ್ಲೂ ಅರೇಬಿಕಾ ಕಾಫಿ ಬೆಳೆಯು ಹಣ್ಣಾಗುತ್ತಿದ್ದು ಮಳೆಯಿಂದ ಭಾರೀ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗೆಯೇ ಭತ್ತದ ಬೆಳೆ ಕೂಡ ಕೊಯ್ಲುಗೆ ಬಂದಿದ್ದು ಅದನ್ನು ಕೊಯ್ಲು ಮಾಡುವುದು ಹೇಗೆ ಎಂಬ ಪ್ರಶ್ನೆ ರೈತರಲ್ಲಿ ಮನೆ ಮಾಡಿದೆ.
ಮೈಸೂರಿನ ನೀರಾವರಿ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು ಬೆಳೆ ಉತ್ತಮವಾಗಿದ್ದು, ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿ ರೈತರಿದ್ದರು. ಜತೆಗೆ ಜಿಲ್ಲೆಯ ಬಹುತೇಕ ಭತ್ತದ ಬಯಲಿನಲ್ಲಿ ಕೊಯ್ಲ ಆರಂಭಿಸಿದ್ದರು. ಕೆಲವರು ಕಾರ್ಮಿಕರ ಸಹಾಯದಿಂದ ಕೊಯ್ಲು ಮಾಡಿಸುತ್ತಿದ್ದರೆ, ಮತ್ತೆ ಕೆಲವರು ಕಟಾವು ಯಂತ್ರದ ಮೊರೆ ಹೋಗಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಮಳೆ ಮೋಡದ ವಾತಾವರಣ ಇತ್ತಾದರೂ ಇದೀಗ ಮಳೆ ಸುರಿಯಲಾರಂಭಿಸಿರುವುದು ರೈತರ ನಿದ್ದೆಗೆಡಿಸಿದೆ.
ಕಳೆದ ಕೆಲವು ವರ್ಷಗಳಿಂದ ಡಿಸೆಂಬರ್ ವೇಳೆಗೆ ಚಂಡಮಾರುತ ಪರಿಣಾಮ ಅಥವಾ ಅಕಾಲಿಕ ಮಳೆ ಸುರಿಯುವುದು ಮಾಮೂಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಭತ್ತದ ಗದ್ದೆಯಲ್ಲಿ ನೀರು ಆರದೆ ಕೊಯ್ಲುಗೆ ತೊಂದರೆ ಆಗುತ್ತಿರುವುದಲ್ಲದೆ ಭತ್ತ ಮೊಳಕೆಯೊಡೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಭತ್ತ ಬೆಳೆದಿದ್ದರು.
ಕಾಫಿ ಬೆಳೆಗಾರರಿಗೂ ಸಂಕಷ್ಟ ತಪ್ಪಿದಲ್ಲ ಈ ನಡುವೆ ಭತ್ತಕ್ಕೆ ಬಾಧಿಸಿದ್ದ ರೋಗವನ್ನೆಲ್ಲ ನಿಯಂತ್ರಿಸಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು ಆದರೆ ಚಂಡಮಾರುತದ ಪರಿಣಾಮ ಇಲ್ಲಿಯೂ ಬೀರಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕಾವೇರಿ, ಲಕ್ಷ್ಮಣತೀರ್ಥ ಮತ್ತು ಕಬಿನಿ ನೀರನ್ನು ಆಶ್ರಯಿಸಿಕೊಂಡು ರೈತರು ಭತ್ತ ಬೆಳೆಯುತ್ತಿದ್ದಾರೆ. ಕೆ,ಆರ್,ನಗರ, ನಂಜನಗೂಡು, ತಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು ಇದು ಆದಾಯದ ಮೂಲವಾಗಿದೆ. ಈಗ ಮಳೆ ಸುರಿಯುತ್ತಿರುವುದರಿಂದ ಹಾನಿಯಾಗುವ ಸಾಧ್ಯತೆ ಜಾಸ್ತಿಯಿದೆ. ಇನ್ನು ಹಾಸನ, ಚಿಕ್ಕಮಗಳೂರಿನಲ್ಲಿಯೂ ಕಾಫಿ ಜತೆಗೆ ಭತ್ತ, ಜೋಳ, ರಾಗಿ ಮೊದಲಾದವುಗಳನ್ನು ಬೆಳೆಯುತ್ತಿದ್ದು ಸಮಸ್ಯೆ ಎದುರಿಸುವಂತಾಗಿದೆ. ಈ ವ್ಯಾಪ್ತಿಯಲ್ಲಿ ಅರೇಬಿಕಾ ಕಾಫಿಯನ್ನು ಬೆಳೆಯುವುದರಿಂದ ಮಳೆಯಿಂದಾಗಿ ಕೊಯ್ಲುಗೆ ಅಡ್ಡಿಯಾಗುತ್ತಿದೆ. ಕೊಡಗಿನಲ್ಲಿ ಮಳೆ,ಶೀತ ಹವೆಯ ಕಾರಣದಿಂದಾಗಿ ಈಗಾಗಲೇ ರೋಬಸ್ಟಾ ಕಾಫಿ ಉದುರಿದ್ದು, ಕಳೆದ
ವರ್ಷಕ್ಕಿಂತ ಇಳುವರಿ ಕಡಿಮೆಯಾಗಿದೆ. ಈ ತಿಂಗಳಾಂತ್ಯದಲ್ಲಿ ರೋಬಸ್ಟಾ ಕಾಫಿ ಕೊಯ್ಲು ಆರಂಭಿಸುವ ಸಾಧ್ಯತೆಯಿದೆ.
ಅರೇಬಿಕಾ ಕಾಫಿ ಬೆಳೆಗಾರರಿಗೆ ಸಂಕಷ್ಟ ತಪ್ಪಿದಲ್ಲ. ಇದರ ಜತೆಗೆ ಭತ್ತ ಬೆಳೆದವರಿಗೆ ಅದನ್ನು ಕೊಯ್ಲು ಮಾಡುವುದು ಸವಾಲ್ ಆಗಿದೆ. ಹೆಚ್ಚಿನವರು ಕೂಲಿ ಆಳುಗಳನ್ನೇ ನಂಬಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಕಾಡುತ್ತಿದ್ದು, ಅಸ್ಸಾಂ ಮೂಲಕ ಕಾರ್ಮಿಕರನ್ನು ಆಶ್ರಯಿಸುವಂತಾಗಿದೆ. ಬಹಳಷ್ಟು ಬೆಳೆಗಾರರು ಭತ್ತದ ಕೃಷಿ ಕಾರ್ಯವನ್ನು ಮುಗಿಸಿ ಕಾಫಿ ಕೊಯ್ಲುನತ್ತ ಮುಖ ಮಾಡುವುದು ಮಾಮೂಲಿಯಾಗಿದೆ. ಆದರೆ ಮಳೆಯ ವಾತಾವರಣ ಎಲ್ಲ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿರುವುದಂತು ನಿಜ. ಈ ಸಮಯದಲ್ಲಿ ಮಳೆಯ ಅಗತ್ಯವೇ ಇರಲಿಲ್ಲ. ಮಳೆ ಬಂದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಬಿಸಿಲಿದ್ದರೆ ಎಲ್ಲ ಬೆಳೆಗಳನ್ನು ಕೊಯ್ಲು ಮಾಡಿ ಮನೆ ತುಂಬಿಸಲು ಅನುಕೂಲವಾಗುತ್ತದೆ. ಕೊಯ್ಲು ಒಕ್ಕಣೆ ಎಲ್ಲದಕ್ಕೂ ಬಿಸಿಲೇ ಬೇಕಾಗಿದೆ. ಆದರೆ ಬೇಡ ಬೇಡವೆಂದರೂ ಮಳೆ ಸುರಿಯುತ್ತಿದ್ದು, ಪ್ರಕೃತಿಗೆ ತಲೆಬಾಗಲೇ ಬೇಕಾಗಿದೆ. ಚಂಡಮಾರುತ ನಿಲ್ಲುವ ತನಕ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.