ದರ್ಶನ್ ಅಭಿಮಾನಿಗಳ ದುರ್ವರ್ತನೆ ವಿರುದ್ಧ ನಟಿ ರಮ್ಯಾ ಸಿಡಿದೆದ್ದಿದ್ದು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ರಮ್ಯಾ ಬಗ್ಗೆ ದರ್ಶನ್ ಅಭಿಮಾನಿಗಳು ಮಾಡಿರುವ ಅಶ್ಲೀಲ ಕಮೆಂಟ್ಗಳನ್ನು ಖಂಡಿಸಿ ಇದೀಗ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಸಹ ನಟಿ ರಮ್ಯಾ ಅವರ ಬೆಂಬಲಕ್ಕೆ ನಿಂತಿದ್ದಾರೆ.
ತಮ್ಮ ವಿರುದ್ಧ ಅಶ್ಲೀಲ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುವ, ಅಶ್ಲೀಲವಾಗಿ ಕಮೆಂಟ್ ಮಾಡುತ್ತಾ ನಿಂದಿಸುತ್ತಿರುವ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಸಮರ ಸಾರಿದ್ದಾರೆ. ದರ್ಶನ್ ಅಭಿಮಾನಿಗಳ ದುರ್ವರ್ತನೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಖಂಡಿಸುತ್ತಿದ್ದ ರಮ್ಯಾ ಇದೀಗ ಕಾನೂನು ಮೊರೆ ಹೋಗಿದ್ದು, ಪೊಲೀಸರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಅಗತ್ಯ ದಾಖಲೆಗಳನ್ನು ನೀಡಿದ್ದಾರೆ. ಆನ್ಲೈನ್ ಟ್ರೋಲಿಂಗ್ ವಿರುದ್ಧ ರಮ್ಯಾ ಮಾಡುತ್ತಿರುವ ಈ ಸಮರದಲ್ಲಿ ರಮ್ಯಾಗೆ ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಶಿವರಾಜ್ ಕುಮಾರ್, ‘ರಮ್ಯಾ, ನಿಮ್ಮ ನಿಲವು ಸರಿಯಿದೆ, ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ’ ಎಂದಿದ್ದಾರೆ. ಮುಂದುವರೆದು, ‘ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಹೀಗೆ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು’ ಎಂದಿದ್ದಾರೆ.
‘ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಷಿಯಲ್ ಮೀಡಿಯಾ ತುಂಬಾ ಬಲಷ್ಠವಾದ ಅಸ್ತ್ರ ಅದನ್ನು ತಮ್ಮ ಏಳಿಗಾಗಿ ಬಳಸಬೇಕೇ ಹೊರತು ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲವು ಸರಿಯದೆ, ನಿಮ್ಮ ಜೊತೆ ನಾವು ನಿಲ್ಲುತ್ತೇವೆ’ ಎಂದಿದ್ದಾರೆ. ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಇಬ್ಬರೂ ಸಹ ಈ ಸಂದೇಶವನ್ನು ಹಂಚಿಕೊಂಡಿದ್ದು, ಇಬ್ಬರೂ ಸಹ ರಮ್ಯಾ ಪರವಾಗಿ ನಿಂತಿದ್ದಾರೆ.
ಶಿವರಾಜ್ ಕುಮಾರ್ ಅವರು ರಮ್ಯಾಗೆ ಬೆಂಬಲ ವ್ಯಕ್ತಪಡಿಸಿ ಮಾಡಿರುವ ಪೋಸ್ಟ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಯುವ ರಾಜ್ಕುಮಾರ್ ತಾವೂ ಸಹ ರಮ್ಯಾ ಪರವಾಗಿ ನಿಂತಿರುವುದಾಗಿ ಘೋಷಿಸಿದ್ದಾರೆ. ಆ ಮೂಲಕ ದೊಡ್ಮನೆ ಕುಟುಂಬದವರು ಸಂತ್ರಸ್ತ ನಟಿಯ ಪರವಾಗಿ ನಿಂತಿದ್ದಾರೆ.
ದರ್ಶನ್ ಜಾಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಹೇಳಿಕೆಯನ್ನು ಆಧರಿಸಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ರಮ್ಯಾ ಹೇಳಿದ್ದರು. ಅದರ ಬೆನ್ನಲ್ಲೆ ದರ್ಶನ್ ಅಭಿಮಾನಿಗಳು ರಮ್ಯಾರ ವಿರುದ್ಧ ಅಶ್ಲೀಲ ಪೋಸ್ಟ್ಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಇದನ್ನು ಕಟುವಾಗಿ ವಿರೋಧಿಸಿದ್ದ ರಮ್ಯಾ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.