ನಟ ದರ್ಶನ್ ಅವರು ಮತ್ತೆ ಜೈಲು ಸೇರಲಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಬೆನ್ನಲ್ಲೇ ಅವರನ್ನು ಇಂದೇ ಬಂಧಿಸೋ ಸಾಧ್ಯತೆ ಇದೆ. ಈಗ ದರ್ಶನ್ ಪ್ರಕರಣದಲ್ಲಿ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನ ರಮ್ಯಾ vs ದರ್ಶನ್ ಫ್ಯಾನ್ಸ್ ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈಗ ದರ್ಶನ್ ಜಾಮೀನು ರದ್ದು ಆದೇಶದ ಬೆನ್ನಲ್ಲೇ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ’ ಎಂದಿದ್ದಾರೆ ರಮ್ಯಾ.
‘ನ್ಯಾಯಯುತವಾಗಿ ಪ್ರಕ್ರಿಯೆಯನ್ನು ಅನುಸರಿಸಿ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಳ್ಳಿ. ಇದು ದೀರ್ಘ ಮತ್ತು ಕಠಿಣ. ಆದರೆ ಸುರಂಗದ ಕೊನೆಯಲ್ಲಿ ಬೆಳಕು ಇದೆ ಎಂಬ ನಂಬಿಕೆ ಇರಲಿ ಎಂದು ನಾನು ಇತರರಿಗೆ ಹೇಳುತ್ತೇನೆ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯ ಸಿಕ್ಕೇ ಸಿಗುತ್ತದೆ. ನಿಮ್ಮ ಪ್ರಜ್ಞೆಗೆ ನಿಷ್ಠರಾಗಿರಿ’ ಎಂದು ರಮ್ಯಾ ಕೋರಿದ್ದಾರೆ.
ಇತ್ತೀಚೆಗೆ ಮಾತನಾಡಿದ್ದ ರಮ್ಯಾ, ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ನಂಬಿಕೆ ಇದೆ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶ ರವಾನೆ ಮಾಡಿದ್ದರು. ಇದು ರಮ್ಯಾ ಅಸಮಾಧಾನಕ್ಕೆ ಕಾರಣ ಆಗಿತ್ತು. ರಮ್ಯಾ ಈ ಸಂಬಂಧ ದೂರು ಕೂಡ ದಾಖಲಿಸಿದ್ದರು. ಈ ದೂರು ಆಧರಿಸಿ ಕೆಲವರನ್ನು ಬಂಧಿಸಲಾಗಿದೆ. ಈಗ ದರ್ಶನ್ ಬಂಧನ ಬೆನ್ನಲ್ಲೇ ರಮ್ಯಾ ಖುಷಿಯಾಗಿದ್ದಾರೆ.