ದಾವಣಗೆರೆ: ದಾವಣಗೆರೆಯ 5 ವರ್ಷದ ಬಾಲಕಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದು ಅಚ್ಚರಿಯಾದರೂ ಸತ್ಯ. ಬಾಲಕಿಯ ಸಾಧನೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ದಾವಣಗೆರೆ ನಗರ ನಿವಾಸಿಯಾಗಿರುವ ಕೇಶವ್ ಎಂಬುವರ ಮೊಮ್ಮಗಳು ಸಿಯಾ ಮೂರು ವರ್ಷದವರಿದ್ದಾಗ, ಅಂದರೆ 2023ರಲ್ಲಿ ಕೇವಲ 40 ಸೆಕೆಂಡ್ಸ್ನಲ್ಲಿ 100 ಮೀಟರ್ ಓಡಿ, ಸಾಧನೆ ಮಾಡಿದ್ದರು. ಇದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಾಗಿತ್ತು. ಇವರ ಸಾಧನೆಗೆ ಅವಾರ್ಡ್ ಸಿಕ್ಕಿತ್ತು.
ಇದೀಗ, ಸಿಯಾ 5 ವರ್ಷದವರಾಗಿದ್ದು, 74 ತರಹದ ಮೆಡಿಸಿನ್ ಹಾಗೂ ಕಾಸ್ಮೆಟಿಕ್ಸ್ಗಳನ್ನು ಗುರುತಿಸಿ ಏಷ್ಯ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದಿದ್ದಾರೆ. ಸಿಯಾ ಅವರ ತಂದೆ ಸುಜಯ್, ತಾಯಿ ಐಶ್ವರ್ಯ ಮಲೇಶಿಯಾದಲ್ಲಿ ವಾಸವಾಗಿದ್ದಾರೆ. ಸಿಯಾ ಕೂಡ ಮಲೇಶಿಯಾದಲ್ಲೇ ತಂದೆ-ತಾಯಿ ಜೊತೆಗೆ ಇರುತ್ತಾರೆ. ಆಗಾಗ ಅಜ್ಜನ ಊರಾದ ದಾವಣಗೆರೆಗೆ ಬರುತ್ತಿರುತ್ತಾರೆ. ದಾವಣಗೆರೆಯಲ್ಲಿ ಕೇಶವ ಅವರದ್ದು ಒಂದು ಮೆಡಿಕಲ್ ಶಾಪ್ ಇದೆ.
ಸಿಯಾ ಅವರು ಅಜ್ಜನ ಮನೆಗೆ ಬಂದಾಗಲೆಲ್ಲ ಕೇಶವ್ ಅವರ ಜೊತೆಗೆ ನಿತ್ಯ ಮೆಡಿಕಲ್ ಶಾಪ್ಗೆ ಹೋಗುತ್ತಿದ್ದರು. ಅಲ್ಲಿ ಯಾವ ಕಾಯಿಲೆಗೆ ಯಾವ ಔಷಧಿ, ಕಾಸ್ಮೆಟಿಕ್ ಐಟಮ್ಸ್ ಯಾವುದು ಅಂತ ತಿಳಿದುಕೊಂಡಿದ್ದಾರೆ. ಇದರಿಂದ, ಮೆಡಿಸಿನ್ ಹಾಗೂ ಕಾಸ್ಮೆಟಿಕ್ಸ್ಗಳನ್ನು ಸುಲಭವಾಗಿ ಗುರುತಿಸಿದ್ದಾರೆ. ತಲೆ ನೋವಿಗೆ ಯಾವ ಔಷಧ, ಅಜೀರ್ಣ ಸಮಸ್ಯೆಗೆ ಯಾವ ಮಾತ್ರೆ ನೀಡಬೇಕು, ಸ್ಪ್ರೇ ಯಾವುದು, ಬಾಂಮ್ ಯಾವುದು ಅನ್ನೋದನ್ನ ಸುಲಲಿತವಾಗಿ ಗುರುತಿಸಿದ್ದಾರೆ. ಸಿಯಾರ ಈ ಐಕ್ಯೂ ಪವರ್ ಮೆಚ್ಚಿ ಏಷ್ಯ ಬುಕ್ ಆಫ್ ರೆಕಾರ್ಡ್ ಅವಾರ್ಡ್ ನೀಡಿದೆ.
ಹುಟ್ಟಿದಾಗಿನಿಂದ ಬಹುಕಾಲ ಮಲೇಶಿಯಾದಲ್ಲೇ ಇದ್ದ ಸಿಯಾಗೆ ಮೊದ ಮೊದಲು ಕನ್ನಡ ಮಾತನಾಡಲು ಕಷ್ಟವಾಗುತ್ತಿತ್ತು. ಅಜ್ಜನ ಮನೆಗೆಂದು ಕರ್ನಾಟಕಕ್ಕೆ ಬಂದಾಗಲೆಲ್ಲ ಕೇವಲ 2 ತಿಂಗಳಲ್ಲಿ ಕನ್ನಡವನ್ನು ಕಲಿತು ಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ.
ಪುಟಾಣಿ ಸಿಯಾಗೆ ಉತ್ತಮವಾದ ಐಕ್ಯೂ ಪವರ್ ಇದ್ದು ಕುಟುಂಬಕ್ಕೆ ಮುದ್ದು ಮಗುವಾಗಿದ್ದಾರೆ. ನಿರಂತರವಾಗಿ ಸಾಧನೆ ಮಾಡುತ್ತಲೇ ಇದ್ದಾರೆ. ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಮೇಲೆ ಉತ್ತಮ ಪ್ರಭುತ್ವ ಸಾಧಿಸುತ್ತಿದ್ದಾರೆ. ಇನ್ನಷ್ಟು ವಿಶಿಷ್ಟ ಸಾಧನೆ ಮಾಡಿ ವಿಶ್ವ ದಾಖಲೆ ಮಾಡುವ ಯೋಜನೆ ಪುಟಾಣಿ ಸಿಯಾ ಹಾಗೂ ಆಕೆಯ ಪಾಲಕರಿಗೆ ಇದೆ.
For More Updates Join our WhatsApp Group :