ದಾವಣಗೆರೆ : ತನ್ನ ಪತ್ನಿಯ ಪ್ರಿಯಕರನನ್ನು ಕೊಲೆಗೈದ ಪತಿಯನ್ನು ಕೊಲೆಯಾದ ಒಂದೇ ಗಂಟೆಯಲ್ಲಿ ದಾವಣಗೆರೆ ಪೊಲೀಸ್ ಇಲಾಖೆಯ ಕ್ರೈಂ ಡಾಗ್ ತಾರಾ ಪತ್ತೆ ಹಚ್ಚಿರುವ ಘಟನೆ ಜಿಲ್ಲೆಯ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೆಗಡೆಹಾಳ್ ಗ್ರಾಮದ ಶಿವಕುಮಾರ್ (28) ಕೊಲೆಯಾದ ಯುವಕ. ಹೊನ್ನೂರು ಗೊಲ್ಲರಹಟ್ಟಿಯ ಜಯ್ಯಪ್ಪ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

ಶಿವಕುಮಾರ್, ಜಯ್ಯಪ್ಪನ ಪತ್ನಿ ಪರಿಮಳಲನ್ನು ಪ್ರೀತಿಸುತ್ತಿದ್ದ. ಮದುವೆಯಾದ ನಂತರವೂ ಕೂಡ ಪರಿಮಳ ಹಾಗೂ ಶಿವಕುಮಾರ್ ಸಂಬಂಧ ಹೊಂದಿದ್ದರು. ಶಿವಕುಮಾರ್, ಪರಿಮಳಳನ್ನು ಭೇಟಿಯಾಗಲು ಹೊನ್ನೂರು ಗೊಲ್ಲರಹಟ್ಟಿ ಬಳಿ ಇರುವ ಜಮೀನಿಗೆ ಬಂದಿದ್ದನು. ಇಬ್ಬರು ಜೊತೆಗಿದ್ದಿದ್ದು ಕಂಡು ಕೋಪಗೊಂಡ ಜಯ್ಯಪ್ಪ, ಶಿವಕುಮಾರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಎನ್ನಲಾಗಿದೆ.
ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸ್ ಕ್ರೈಂ ಡಾಗ್ ತಾರಾ ಆರೋಪಿಯ ಜಾಡು ಹಿಡಿದು ಹೊರಟಿತ್ತು. ಕೊಲೆ ಆರೋಪಿ ಮನೆ ಮುಂದೆ ನಿಂತ ಕ್ರೈಂ ಡಾಗ್ ತಾರಾ, ಕೊಲೆಯಾದ ಒಂದು ಗಂಟೆಯಲ್ಲೇ ಆರೋಪಿಯನ್ನು ಪತ್ತೆ ಮಾಡಿದೆ.