ದಾವಣಗೆರೆ: ಬಾಲಕ ಬೈಕ್ ಚಲಾಯಿಸಿದ ಪ್ರಕರಣ ಸಂಬಂಧ ವಾಹನದ ಮಾಲೀಕರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ವಾಹನದ ಮಾಲೀಕ ಪ್ರದೀಪ್ ಎಂಬವರಿಗೆ ಕೋರ್ಟ್ ದಂಡ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 13ರಂದು ದಾವಣಗೆರೆ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಬಾಲಕ ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ, ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ಚಲಾಯಿಸಿಕೊಂಡು ಬಂದಿದ್ದನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ಅನ್ನು ಜಪ್ತಿ ಮಾಡಿ, ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ದಂಡ ವಿಧಿಸಿದ ಕೋರ್ಟ್: ದಾವಣಗೆರೆಯ 3ನೇ ಎಎಸ್ಸಿಜೆ ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಬೈಕ್ ಮಾಲೀಕ ಪ್ರದೀಪ್ ಅವರ ವಿರುದ್ಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮಾಲೀಕರು ಬಾಲಕನಿಗೆ ವಾಹನ ಚಾಲನೆ ಮಾಡಲು ಕೊಟ್ಟಿದ್ದು ಅಪರಾಧ ಎಂದು ತಿಳಿಸಿ 25,000 ರೂ.ಗಳ ದಂಡ ವಿಧಿಸಿದೆ. ಈ ಮೂಲಕ ಅಪ್ರಾಪ್ತ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ ಹಾಗೂ ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ, ಅರಿವು ಮೂಡಿಸಿದ್ದಾರೆ.