ಕೊಪ್ಪಳ: ಯಾದಗಿರಿ ನಗರದ ಮನೆಯಲ್ಲಿ ಶವವಾಗಿ ಪತ್ತೆಯಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ ಅವರ ಕುಟುಂಬಕ್ಕೆ ಗೃಹ ಸಚಿವ ಜಿ ಪರಮೇಶ್ವರ ಅವರು ಬುಧವಾರ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಆದರೆ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವುದಿಲ್ಲ ಎಂದು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಸೋಮನಾಳ ಗ್ರಾಮದ ಮೃತ ದಲಿತ ಪೊಲೀಸ್ ಅಧಿಕಾರಿಯ ನಿವಾಸಕ್ಕೆ ಇಂದು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ”ಎಸ್‌ಐ ಪತ್ನಿಗೆ ಕೆಲಸ ಕೊಡಿಸುತ್ತೇವೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯಲ್ಲಿ(ಜೆಸ್ಕಾಂ) ಕೆಲಸ ಕೇಳಿದ್ದಾರೆ. ಉದ್ಯೋಗ ಕಲ್ಪಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಜತೆ ಮಾತನಾಡುತ್ತೇನೆ. ಗೃಹ ಇಲಾಖೆಯಿಂದ 50 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಪರಮೇಶ್ವರ ಹೇಳಿದ್ದಾರೆ.
ಪೋಸ್ಟಿಂಗ್‌ಗಾಗಿ ಕಾಂಗ್ರೆಸ್ ಶಾಸಕ ಮತ್ತು ಅವರ ಪುತ್ರ ಹಣ ಕೇಳುವ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಗಳು ಕೇಳಿಬಂದ ದಿನವೇ ನಾನು ಅಪರಾಧ ತನಿಖಾ ಇಲಾಖೆಯಿಂದ(ಸಿಐಡಿ) ತನಿಖೆಗೆ ಆದೇಶಿಸಿದೆ. ಯಾವುದೇ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವ ಮೊದಲು ನಾವು ಎರಡು ವರ್ಷಗಳ ಕಾಲಾವಧಿಯನ್ನು ನಿಗದಿಪಡಿಸಿದ್ದೇವೆ ಎಂದು ಪರಮೇಶ್ವರ ಸಮರ್ಥಿಸಿಕೊಂಡರು
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಬಿಜೆಪಿ ಬೇಡಿಕೆಯ ಬಗ್ಗೆ ಕೇಳಿದಾಗ, ಪ್ರತಿಪಕ್ಷಗಳಿಂದ ನಾನು ಕಲಿಯಬೇಕಾಗಿಲ್ಲ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವುದಿಲ್ಲ. ಇದು ಸಿಬಿಐ ತನಿಖೆಗೆ ಯೋಗ್ಯವಾದ ಪ್ರಕರಣವಲ್ಲ. ಎಸ್‌ಐ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತೇವೆ. ಅವರಿಗೆ ನ್ಯಾಯ ಸಿಗದಿದ್ದಲ್ಲಿ ಆ ಬಗ್ಗೆ ನೋಡುತ್ತೇವೆ’ ಎಂದರು.
“ಏಳು ತಿಂಗಳೊಳಗೆ ಪರಶುರಾಮ ಹೇಗೆ ವರ್ಗಾವಣೆಯಾದರೋ ಗೊತ್ತಿಲ್ಲ. ಅವದಿಗೂ ಮೊದಲೇ ವರ್ಗಾವಣೆ ಬಗ್ಗೆ ಕೂಡ ಸಿಐಡಿ ತನಿಖೆಯಲ್ಲಿ ಹೊರಗೆ ಬರುತ್ತದೆ. ಪೊಲೀಸರು ಎಫ್‌ಐಆರ್ ದಾಖಲಿಸುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ಪರಮೇಶ್ವರ ಹೇಳಿದ್ದಾರೆ.