ರಾಮನಗರ: ಬೊಂಬೆನಗರಿ ಚನ್ನಪಟ್ಟಣ ಉಪಚುನಾವಣಾ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ರಾಜಕೀಯ ಪ್ರಕ್ರಿಯೆಗಳು ಆರಂಭವಾಗಿದ್ದು, ಸಭೆ, ಚರ್ಚೆಗಳು ನಡೆಯುತ್ತಿವೆ. ”ಟಿಕೆಟ್ ಸಂಬಂಧ ಜೆಡಿಎಸ್ ಪಕ್ಷದ ಮುಖಂಡರ ಸಭೆ ಕರೆದಿದ್ದೇನೆ. ಸೋಮವಾರ ಎನ್ಡಿಎ ಅಭ್ಯರ್ಥಿ ಆಯ್ಕೆ ಮಾಡಲಾಗುವುದು” ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿ ಕೇತುಗಾನಹಳ್ಳಿ ತೋಟದ ಮನೆ ಬಳಿ ಜೆಡಿಎಸ್ ಮುಖಂಡರ ಸಭೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು. ”ಈಗಾಗಲೇ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಾತ್ರದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಶಿಗ್ಗಾಂವಿ, ಸಂಡೂರಲ್ಲಿ ನಮ್ಮ ಪಾತ್ರ ಕಡಿಮೆ ಇರಬಹುದು. ಆದರೆ ಒಂದೊಂದು ವೋಟು ಕೂಡ ಮುಖ್ಯವಾಗುತ್ತದೆ. ನಮ್ಮ ಪಕ್ಷದ ಸಂಘಟನೆ, ಹೇಗೆ ಕೆಲಸ ಮಾಡಬೇಕೆಂಬ ಬಗ್ಗೆ ಸಭೆ ನಡೆಸಿದ್ದೇನೆ” ಎಂದರು.
”ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೂಡ ಚರ್ಚೆ ಮಾಡಲಾಯಿತು. ಆದರೆ, ಅಂತಿಮವಾಗಿ ಚನ್ನಪಟ್ಟಣದ ಬಗ್ಗೆ ಇನ್ನೂ ಏನೂ ತೀರ್ಮಾನ ಆಗಿಲ್ಲ, ಅಲ್ಲೇ ಇದೆ. ನಾನು ಬಿಜೆಪಿಯ ರಾಜ್ಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ದೆಹಲಿಯಲ್ಲಿ ಕ್ಷೇತ್ರದ ತೀರ್ಮಾನವನ್ನು ನನಗೆ ಬಿಟ್ಟಿದ್ದಾರೆ. ಚನ್ನಪಟ್ಟಣ ನೀವು ಪ್ರತಿನಿಧಿಸುವ ಕ್ಷೇತ್ರ, ತೀರ್ಮಾನ ನಿಮ್ಮದು ಎಂದು ಹೇಳಿದ್ದಾರೆ. ನಮಗೆ ಎನ್ಡಿಎ ಸೀಟ್ ಗೆಲ್ಲಬೇಕು ಅನ್ನೋದು ಅಷ್ಟೇ ಇದೆ. ಇದರಲ್ಲಿ ದುಡುಕಲ್ಲ, ರಾಜಕೀಯ ವಾಸ್ತವಾಂಶಗಳ ಬಗ್ಗೆ ಲೆಕ್ಕಾಚಾರ ಮಾಡಿ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
ಇನ್ನೊಂದೆಡೆ, ಬಿಡದಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ”ಚನ್ನಪಟ್ಟಣ ಉಪಚುನಾವಣೆ ಗೆಲ್ಲಬೇಕಾದರೆ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಿಂತರೆ ಗೆಲ್ಲಬಹುದು ಎಂಬುದು ಜೆಡಿಎಸ್ ಮುಖಂಡರ ಒತ್ತಾಯವಾಗಿದೆ. ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಕೇವಲ 20 ದಿನಗಳು ಮಾತ್ರ ಇದೆ. ನಿಖಿಲ್ ಅವರನ್ನು ಎನ್ಡಿಎ ಅಭ್ಯರ್ಥಿಯನ್ನಾಗಿ ಮಾಡಿದರೆ ಒಳ್ಳೆಯದು. ನಾವೆಲ್ಲರೂ ಕೂಡ ಒಗ್ಗಟ್ಟಿನಿಂದ ಹೋರಾಟ ಮಾಡಲು ಅನುಕೂಲವಾಗಲಿದೆ. ಯೋಗೇಶ್ವರ್ ಅವರು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರಷ್ಟೆ, ಅಂತಿಮವಾಗಿ ಎನ್ಡಿಎ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ” ಎಂದರು.