ದೆಹಲಿ: 24ವರ್ಷದ ಮಹಿಳೆಯ ಕೊಳೆತ ಶವವನ್ನು ದೆಹಲಿಯ ಆಕೆಯ ಬಾಡಿಗೆ ವಸತಿಗೃಹದಲ್ಲಿ ಹಾಸಿಗೆಯೊಳಗೆ ತುಂಬಿಸಿಟ್ಟಿದ್ದನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯ ಪತಿಯೇ ಆಕೆಯನ್ನು ಕೊಲೆ ಮಾಡಿ ಶವವನ್ನು ಮಲಗುವ ಕೋಣೆಯಲ್ಲಿ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರ ಪ್ರಕಾರ, ದೀಪಾ ಎಂದು ಗುರುತಿಸಲಾದ ಮಹಿಳೆಯ ಕೊಳೆತ ಶವವನ್ನು ದೆಹಲಿಯ ದ್ವಾರಕಾ ಜಿಲ್ಲೆಯ ದಾಬ್ರಿ ಪ್ರದೇಶದಲ್ಲಿ ಶುಕ್ರವಾರ, ಜನವರಿ 3ರಂದು ಬಾಡಿಗೆಗೆ ಪಡೆಯಲಾಗಿದ್ದ ಮನೆಯಲ್ಲಿ ಕಂಡುಬOದಿದೆ. ಘಟನೆಯ ನಂತರ ದೀಪಾ ಅವರ ಪತಿ ಧನರಾಜ್ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ತನಿಖೆ ಆರಂಭಿಸಲಾಗಿದೆ.
ದಾಬ್ರಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಹತ್ಯೆಯ ಬಗ್ಗೆ ಸ್ಥಳೀಯ ಪೊಲೀಸ್ ತಂಡಕ್ಕೆ ಎಚ್ಚರಿಕೆ ದೊರೆತ ನಂತರ ಘಟನೆ ಮುನ್ನೆಲೆಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ದೀಪಾ ಅವರ ಮನೆಯ ಮಲಗುವ ಕೋಣೆಯಲ್ಲಿ ಕೊಳೆತ ಶವವನ್ನು ಪತ್ತೆ ಹಚ್ಚಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೀಪಾ 5 ವರ್ಷಗಳ ಹಿಂದೆ ವಿವಾಹವಾದ ತನ್ನ ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮಹಿಳೆಯ ತಂದೆ ಅಶೋಕ್ ಚೌಹಾಣ್ ಅವರ ದೂರಿನ ನಂತರ ಆಕೆಯ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಂತ್ರಸ್ತೆಯ ಪತಿ ತಲೆಮರೆಸಿಕೊಂಡಿರುವ ಕಾರಣ, ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಅನೇಕ ತಂಡಗಳನ್ನು ರಚಿಸಲಾಗಿದೆ, ”ಎಂದು ಅಧಿಕಾರಿ ಹೇಳಿದರು. ದಂಪತಿಯ ಎರಡು ವರ್ಷದ ಮಗು ದೀಪಾ ಅವರ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದೆ ಎಂದು ಅವರು ಹೇಳಿದರು.