ಮರು ಸರ್ವೆ ಬಗ್ಗೆ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ: ಸಚಿವ Shivaraj Thangadagi

ಮರು ಸರ್ವೆ ಬಗ್ಗೆ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ: ಸಚಿವ Shivaraj Thangadagi

ಬೆಂಗಳೂರು: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಮರು ಸಮೀಕ್ಷೆ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರು ಹಾಗೂ ಮುಖ್ಯಮಂತ್ರಿಗಳು ಹೇಳಿದ್ದನ್ನು ಪಾಲನೆ ಮಾಡಬೇಕು. ಕಾಂತರಾಜು ಅವರ ವರದಿಯ ಬಗ್ಗೆಯೂ ಚರ್ಚೆಯಾಗಲಿದೆ. ಮೂರು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಎಲ್ಲಾ ಸಚಿವರು ಸಲಹೆಗಳನ್ನು ನೀಡಿದ್ದಾರೆ. ನಾಳೆ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಒತ್ತಡ ಅನ್ನುವ ಪ್ರಶ್ನೆಯೇ ಇಲ್ಲ.

ಹೈಕಮಾಂಡ್ ಬಹಳ ಸ್ಪಷ್ಟವಾಗಿ ಹೇಳಿದೆ, ಜಾತಿ ಗಣತಿ, ಆರ್ಥಿಕ, ಸಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎಂದಿದೆ. ಆ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು. ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಯಾರ ಮನಸ್ಸಿಗೂ ನೋವು ಆಗುವುದಿಲ್ಲ. ರಾಜ್ಯದ ಜನರಿಗೆ ಅನುಕೂಲ ಆಗಬೇಕು ಅಷ್ಟೇ ಎಂದರು.

ಇಡಿ ದಾಳಿ ವಿರುದ್ಧ ತಂಗಡಗಿ ಆಕ್ರೋಶ:

ಕಾಂಗ್ರೆಸ್ ಶಾಸಕರ ಮನೆಗಳ ಮೇಲೆ ಇಡಿ ದಾಳಿ ನಡೆಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇಡಿಯವರು ವ್ಯವಸ್ಥಿತವಾಗಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಈ ದಾಳಿಗೆ ನಾವು ಹೆದರಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸಾವಿರಾರು ಕೋಟಿಯ ಚುನಾವಣಾ ಬಾಂಡ್ ಹಗರಣದ ಬಗ್ಗೆ  ಇಡಿ ಅಧಿಕಾರಿಗಳು ಏಕೆ ಯಾವುದೇ ಸುಮೊಟೊ ಪ್ರಕರಣ ದಾಖಲಿಸಿಲ್ಲ? ಕೇಂದ್ರದ ಹಗರಣ ಏಕೆ ಇವರ ಕಣ್ಣಿಗೆ  ಕಾಣುತ್ತಿಲ್ಲವೇ ? ವಾಲ್ಮೀಕಿ ಮತ್ತು ಮೂಡಾ ಕೂಡ ಪ್ರಕರಣಗಳು ಮಾತ್ರ ಕಣ್ಣಿಗೆ ಕಾಣುತ್ತವೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದ್ದು, ಬಿಜೆಪಿಯವರಿಗೆ ಎಲ್ಲವೂ ಗೊತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಬ್ರಿಟೀಷರನ್ನೇ ಓಡಿಸಿದವರು, ಇನ್ನು ಬಿಜೆಪಿಯವರಿಗೆ ನಾವು ಮಣಿಯುತ್ತೇವೆಯೇ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಶ್ರೀರಾಮುಲು ಅವರು, ಅವರ ಸ್ನೇಹಿತ ಜನಾರ್ದನ್ ರೆಡ್ಡಿ ಅವರ ಬಗ್ಗೆ ಮೊದಲು ಮಾತನಾಡಲಿ. ಅವರ ಗೆಳೆಯ ಎಲ್ಲಿದ್ದಾರೆ ಎಂದು ಹೇಳಲಿ. ಆ ಬಳಿಕ ಯಾರ ಮನೆ ಮುಂದೆ ಬೃಂದಾವನ ಇದೆ ಎಂಬುದು ತಿಳಿಯಲಿದೆ ಎಂದು ಛೇಡಿಸಿದರು.

Leave a Reply

Your email address will not be published. Required fields are marked *