ದೇವನಹಳ್ಳಿ: ಅದು ದೊಡ್ಡಬಳ್ಳಾಪುರ ಹೊರವಲಯದ, ನೂರಾರು ವರ್ಷಗಳಿಂದ ರೈತರು ಕೃಷಿ ಮಾಡಿಕೊಂಡು ಬಂದಿರುವ ಸಾಮಾನ್ಯ ಕೃಷಿ ಭೂಮಿ. ಅಲ್ಲಿ ಹಿಂದೆಲ್ಲ ಅನೇಕ ಬಾರಿ ಬೂದಿ ಮಡಿಕೆ ಚೂರುಗಳು ಮತ್ತು ಇಟ್ಟಿಗೆ ಗೋಡೆಗಳು ಸಿಕ್ಕಿದ್ದವು. ಆಗ ಜನರು ಅಷ್ಟಾಗಿ ತಲೆ ಕೆಡಸಿಕೊಂಡಿರಲಿಲ್ಲ. ಆದರೆ, ಇದೀಗ ಅದೇ ಭೂಮಿಯಲ್ಲಿ ರಹಸ್ಯವೊಂದರ ಸುಳಿವು ಸಿಕ್ಕಿದ್ದು, ಅದನ್ನು ಬೇಧಿಸಲು ಸರ್ಕಾರ ಮತ್ತು ಸಂಶೋಧನಾಕಾರರು ಮುಂದಾಗಿದ್ದಾರೆ.

ಭೂಮಿಯನ್ನೆಲ್ಲ ನೇಗಿಲಿನಿಂದ ಉಳುಮೆ ಮಾಡಿ ಹದ ಮಾಡಿದ್ದು, ಮುಂಗಾರಿಗೆ ಭರ್ಜರಿ ಬೆಳೆ ಬೆಳೆಯೋಣ ಎಂದು ರೈತ ಮುಂದಾಗಿರುವಾಗಲೇ ತಂಡ ತಂಡಗವಾಗಿ ಬಂದ ಬೌದ್ಧ ಧರ್ಮದ ಅನುಯಾಯಿಗಳು ತೋಟದ ತುಂಬೆಲ್ಲ ಓಡಾಡಲು ಶುರುಮಾಡಿದ್ದಾರೆ. ಸಂಶೋಧಕರು, ಸ್ಥಳೀಯವಾಗಿ ಸಿಕ್ಕ ಕಲ್ಲುಗಳ ನೂರಾರು ವರ್ಷಗಳ ಹಿಂದಿನ ಇಟ್ಟಿಗೆಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಜನ ಕುತೂಹಲದಿಂದ ಇವುಗಳನ್ನೆಲ್ಲ ಗಮನಿಸುತ್ತಿದ್ದರೆ, ಖುದ್ದು ಸಚಿವರೇ ಸ್ಥಳಕ್ಕೆ ಬಂದು ಭೂಗರ್ಭದ ಸಂಶೋಧನೆಗೆ ಚಾಲನೆ ನೀಡಿದ್ದಾರೆ. ಅಂದಹಾಗೆ, ಇದೆಲ್ಲ ನಡೆದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಬೂದಿಗುಡ್ಡದಲ್ಲಿ. ಮೆಲ್ನೋಟಕ್ಕೆ ಸಾಮಾನ್ಯ ಕೃಷಿ ಭೂಮಿಯಂತಿದ್ದರೂ ಒಡಲಿನಲ್ಲಿ ಸಾವಿರಾರು ರೋಚಕ ಕಥೆಗಳು, ಬೌದ್ಧ ಧರ್ಮದ ಪ್ರಾಚೀನ ಸಂಸ್ಕೃತಿಯ ಕುರುಹುಗಳನ್ನು ಈ ಭೂಮಿ ಒಳಗೊಂಡಿದೆ ಎನ್ನಲಾಗಿದೆ.
ಬೂದಿಗುಡ್ಡದಲ್ಲಿ ಸಿಕ್ಕಿದ್ದವು ಇಟ್ಟಿಗೆ ಗೋಡೆಯ ಕುರುಹು, ಮಡಿಕೆಗಳು!
ರಾಜಘಟ್ಟ ಗ್ರಾಮದ ಬೂದಿಗುಡ್ಡದಲ್ಲಿ ಈ ಹಿಂದೆ ಹೆಚ್ಚು ಪ್ರಮಾಣದ ಬೂದಿ ಇತ್ತು. ಕೃಷಿಯ ಕಾರಣ ಅದನ್ನೆಲ್ಲ ಗ್ರಾಮಸ್ಥರು ಬೇರೆಡೆ ಸಾಗಿಸಿ ಜಮೀನಿನಲ್ಲಿ ಉಳುಮೆ ಮಾಡಿದ್ದರು. ಅಲ್ಲದೆ ಗ್ರಾಮಸ್ಥರು ಕೃಷಿ ಮಾಡಲು ಉಳುಮೆ ಮಾಡಿದಾಗಲೆಲ್ಲ ಇಟ್ಟಿಗೆಯ ಗೋಡೆಗಳು, ಮಡಿಕೆಗಳು ಸಿಕ್ಕಿದ್ದವು. ಅವುಗಳೆಲ್ಲ ಈ ಹಿಂದೆ ಬೌದ್ಧ ಧರ್ಮದ ಜನರು ಹರಕೆ ತೀರಿಸಲು ಭೂಮಿಯಲ್ಲಿ ಹೂತಿಟ್ಟಿದ್ದ ಮಡಿಕೆಗಳು ಎನ್ನಲಾಗುತ್ತಿದೆ. ಅಲ್ಲದೆ, ಬೌದ್ಧರು ಇಲ್ಲೇ ವಾಸಿಸಿದ್ದರು. ಅವರು ಅಂದು ಬೌದ್ಧ ವಿಹಾರಗಳು, ಮನೆಗಳು ಮತ್ತು ಹಲವು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದು ಅದಕ್ಕೆ ಪುರಾವೆಗಳಿವೆ ಎನ್ನಲಾಗುತ್ತಿದೆ.